ಉಡುಪಿ, ಜ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಪ್ರತಿವರ್ಷ ನಡೆಸುವ ಸಂಸ್ಕೃತಿ ಉತ್ಸವ ಜನವರಿ 30, 31 ರಂದು ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಹವಾ ನಿಯಂತ್ರಿತ ಸಭಾಂಗಣದಲ್ಲಿ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಜನವರಿ 30 ಗುರುವಾರದಂದು ಸಂಜೆ 5:30ಕ್ಕೆ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ (ರಿ) ಹೆಬ್ರಿ ಪ್ರಾಯೋಜಿತ ‘ಶಾರದಾ ಕೃಷ್ಣ ಪುರಸ್ಕಾರ’ ವನ್ನು ರಂಗ ನಿರ್ದೇಶಕರಾದ ಜೀವನ ರಾಮ್ ಸುಳ್ಯ ಅವರಿಗೆ ನೀಡಲಾಗುವುದು.
ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ವೈದೇಹಿ ರಚನೆಯ, ಜೀವನ ರಾಮ್ ಸುಳ್ಯ ನಿರ್ದೇಶನದ ‘ನಾಯಿಮರಿ’ ನಾಟಕ ಪ್ರದರ್ಶನಗೊಳ್ಳಲಿದೆ. ಜನವರಿ 31 ಶುಕ್ರವಾರ ಸಂಜೆ 5:30ಕ್ಕೆ ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್ ಅವರಿಗೆ ಪಂಚಮಿ ಟ್ರಸ್ಟ್ (ರಿ) ಉಡುಪಿ ಪ್ರಾಯೋಜಿತ ‘ಪಂಚಮಿ ಪುರಸ್ಕಾರ’ ನೀಡಲಾಗುವುದು. ನಂತರ ಮಂಡ್ಯ ರಮೇಶ್ ನಿರ್ದೇಶನದ ಹಬೀಬ್ ತನ್ವೀರ್ ರಚನೆಯ ವ್ಯಂಗ್ಯ ವಿಡಂಬನಾತ್ಮಕ ನಾಟಕ ‘ಚೋರ ಚರಣದಾಸ’ ಪ್ರದರ್ಶನಗೊಳ್ಳಲಿದೆ ಎಂದು ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ರವಿರಾಜ್ ಎಚ್. ಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.