ಉಡುಪಿ, ಜ.26: ರಂಗೋಲಿಯು ಏಕಾಗ್ರತೆಯ ಅದ್ಭುತ ಕಲೆಯಾಗಿದೆ, ಭಾರತೀಯ ಸಂಸ್ಕ್ರತಿಯ ಸ್ವರೂಪದ ಈ ವಿಶೇಷ ಕಲಾ ಪ್ರಕಾರವನ್ನು ಎಲ್ಲರೂ ಮೈಗೂಡಿಸಬೇಕೆಂದು ಡಾ.ಟಿ.ಎಂ.ಪೈ ಪಾಲಿಟೆಕ್ನಿಕ್ ಕಾಲೇಜಿನ ಪ್ರಬಂಧಕ ರಾಧಾಕೃಷ್ಣ ಸಾಮಂತ್ ಹೇಳಿದರು. ಅವರು ಭಾನುವಾರ ಮಣಿಪಾಲ ಶಾಂತಿ ನಗರದ ಗಣೇಶ ಸಭಾಭವನದಲ್ಲಿ ನಡೆದ ಕನ್ನಡ ಜಾನಪದ ಪರಿಷತ್ ಬೆಂಗಳೂರು ಉಡುಪಿ ಜಿಲ್ಲಾ ಘಟಕ ಕಜಾಪ ಉಡುಪಿ ತಾಲೂಕು ಘಟಕ ಮತ್ತು ಗಣೇಶ ಭಜನಾ ಮಂಡಳಿ ವತಿಯಿಂದ ಉಡುಪಿ ತಾಲೂಕು ಮಟ್ಟದ ರಂಗೋಲಿ ಸ್ಪರ್ಧಾ ಸಂಭ್ರಮದಲ್ಲಿ ಮಾತನಾಡಿದರು.
ರಂಗೋಲಿಯ ಮೇಲೆ ಇತ್ತೀಚೆಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಸರಿಯಲ್ಲ ಎಂದರು. ಅಧ್ಯಕ್ಷತೆ ವಹಿಸಿದ ಕಜಾಪ ಜಿಲ್ಲಾಧ್ಯಕ್ಷ ಡಾ.ಗಣೇಶ ಗಂಗೊಳ್ಳಿ ಮಾತನಾಡಿ, ರಂಗೋಲಿಯು ರಂಗ (ಭಗವಂತ) ನನ್ನು ಒಲಿಸುವ ಪವಿತ್ರವಾದ ಕಲೆಯಾಗಿದೆ. ನಮ್ಮ ಮನಸ್ಸುಗಟ್ಟಿಗೊಳಿಸುವ ಈ ಕಲೆಯನ್ನು ಬೆಳೆಸುವ ದೃಷ್ಟಿಯಿಂದ ಈ ರೀತಿಯ ಕಾಯ೯ಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ವೇದಿಕೆಯಲ್ಲಿ ತಾಲೂಕು ಅಧ್ಯಕ್ಷೆ ಮಾಯಾ ಕಾಮತ್, ಗುರುಶ್ರೀ ಸಹಕಾರಿಯ ನಿದೇ೯ಶಕಿ ಭಾರತಿ ಇಂದು ಶೇಖರ, ಉದ್ಯಮಿ ವಿದ್ಯಾ ಎಸ್ ನಾಯಕ್, ಸುಮತಿ ಪೂಜಾರಿ ಮುಂತಾದವರಿದ್ದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ನಗದು ಸಹಿತ ಬಹುಮಾನ ನೀಡಲಾಯಿತು. ತೀರ್ಪುಗಾರರಾಗಿ ಶ್ರೀಲತಾ ಮತ್ತು ಪ್ರಭಾವತಿ ಆಗಮಿಸಿದ್ದರು. ಜಿಲ್ಲಾ ಕಾಯ೯ದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಕಮಲಾಕ್ಷಿ ನಿರೂಪಿಸಿದರು.