ಉಡುಪಿ, ಜ.26: ಮೂರು ದಶಕಗಳ ಉಡುಪಿಯ ಪ್ರಗತಿಯ ಕುರಿತಾಗಿ ಚಿತ್ರಗಳ ಮೂಲಕ ಸಾಕ್ಷೀಕರಿಸುವ ವಿಶಿಷ್ಟ ಮಿನಿ ಕಾಫಿ ಟೇಬಲ್ ಬುಕ್ ಫೆ. 1 ರಂದು ಉಡುಪಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭೂತರಾಜ ಪ್ರಕಾಶನದ 4 ನೇ ಕೃತಿ ಇದಾಗಿದ್ದು ಉಡುಪಿಯ 30 ವರ್ಷಗಳ ಬೆಳವಣಿಗೆ ಕುರಿತು ಈ ಪುಸ್ತಕ ಬೆಳಕು ಚೆಲ್ಲಲಿದೆ. ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಚಿತ್ರ ಕಲಾವಿದ ಆಸ್ಟ್ರೋ ಮೋಹನ್ 30 ವರ್ಷಗಳ ಹಳೆಯ ಚಿತ್ರಗಳನ್ನು ನೀಡಿದ್ದಾರೆ. ಉಡುಪಿ ಜಿಲ್ಲೆಗೂ ಮುನ್ನ ಇದ್ದ ಪರಿಸರ ಮತ್ತು ಅಭಿವೃದ್ಧಿ ಹೊಂದಿದ ಅದೇ ಸ್ಥಳಗಳನ್ನ ಅಕ್ಕ ಪಕ್ಕದಲ್ಲಿರಿಸಿ ಪುಸ್ತಕವನ್ನು ಕಟ್ಟಲಾಗಿದೆ ಎಂದು ಪ್ರಕಾಶಕರಾದ ಪ್ರವೀಣಾ ಮೋಹನ್ ಅವರು ಮಾಹಿತಿ ನೀಡಿದ್ದಾರೆ.
ಉಡುಪಿಯ ಸ್ಥಿತಿಗತಿಯ ಬಗ್ಗೆ ಹಿಂದಿನ ಮತ್ತು ವರ್ತಮಾನದ ಕುರಿತು ಸಚಿತ್ರ ಮಾಹಿತಿ ನೀಡುವ ಈ ಪುಸ್ತಕವು ಭವಿಷ್ಯದ ಬೆಳಣಿಗೆಯ ಕುರಿತು ಎಚ್ಚರಿಕೆಯ ಗಂಟೆಯನ್ನೂ ಬಾರಿಸುತ್ತದೆ. ಉದಯವಾಣಿಯ ವಿಶ್ರಾಂತ ಸಂಪಾದಕರಾದ ಗುರುರಾಜ್ ಮುನ್ನುಡಿ ಬರೆದಿದ್ದು, ಫೋಟೋಗ್ರಫಿ ಸೊಸೈಟಿ ಆಫ್ ಇಂಡಿಯಾದ ಮಾಜಿ ಅಧ್ಯಕ್ಷ ನಾರಾಯಣ ಪಂಜೆ ಸಂದೇಶ ನೀಡಿದ್ದಾರೆ.
ಲೋಕಾರ್ಪಣೆ ಕಾರ್ಯಕ್ರಮವು ಉಡುಪಿ ಶಾರದಾ ಕಲ್ಯಾಣ ಮಂಟಪದ ಬಳಿ ಇರುವ ಐವೈಸಿ ಯಕ್ಷಗಾನ ಕಲಾರಂಗದ ಹವಾ ನಿಯಂತ್ರಿತ ಸಭಾಂಗಣದಲ್ಲಿ ಫೆ. 1 ರಂದು ಸಂಜೆ 4.30 ಕ್ಕೆ ನಡೆಯಲಿದೆ. ಮಣಿಪಾಲ ವಿವಿ ಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಕೃತಿ ಬಿಡುಗಡೆಗೊಳಿಸಲಿದ್ದಾರೆ. ಮಣಿಪಾಲ್ ಮೀಡಿಯಾ ನೆಟ್ ವರ್ಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾದ ಸತೀಶ್ ಯು ಪೈ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಯಶ್ಪಾಲ್ ಸುವರ್ಣ, ಅದಾನಿ ಸಮೂಹದ ಕಾರ್ಯನಿರ್ವಾಹಕ ಅಧ್ಯಕ್ಷ ಕಿಶೋರ್ ಆಳ್ವ, ಹಿರಿಯ ಛಾಯಾಚಿತ್ರ ಕಲಾವಿದ ಯಜ್ಞ ಮಂಗಳೂರು ಶುಭ ಹಾರೈಸಲಿದ್ದಾರೆ.