ಉಪ್ಪೂರು, ಜ.21: ಒಂದೆಡೆ ದೇಶಾದ್ಯಂತ ಸ್ವಚ್ಛತೆಯ ಕಾಳಜಿಯ ಬಗ್ಗೆ ಸರಣಿ ಕಾರ್ಯಕ್ರಮಗಳು ನಡೆಯುತ್ತಿದ್ದು ಮತ್ತೊಂದೆಡೆ ಕಠಿಣ ಕ್ರಮದ ಕೊರತೆಯಿಂದ ಕಿಡಿಗೇಡಿಗಳು ಊರಿನ ಸೌಂದರ್ಯಕ್ಕೆ ಧಕ್ಕೆಯನ್ನುಂಟು ಮಾಡುವ ಘಟನೆಗಳು ರಾಜಾರೋಶವಾಗಿ ನಡೆಯುತ್ತಿದೆ. ಒಂದೆಡೆ ಉಡುಪಿ ಜಿಲ್ಲೆ ಕರ್ನಾಟಕ ಒಲಂಪಿಕ್ಸ್ ಆಯೋಜಿಸುತ್ತಿದ್ದು ರಾಜ್ಯಕ್ಕೆ ಹೆಮ್ಮೆಯಾಗಿದೆ. ರಾಜ್ಯದ ಮೂಲೆಮೂಲೆಗಳ ಕ್ರೀಡಾಪಟುಗಳು ಉಡುಪಿಯ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ. ಆದರೆ, ಉಡುಪಿ ಜಿಲ್ಲೆಯ ಉಪ್ಪೂರು ರಾಷ್ಟ್ರೀಯ ಹೆದ್ದಾರಿ 66 ರ ಇಕ್ಕೆಲಗಳಲ್ಲಿ ಕಿಡಿಗೇಡಿಗಳು ದಿನನಿತ್ಯ ತ್ಯಾಜ್ಯವನ್ನು ಯದ್ವಾ ತದ್ವಾ ಎಸೆದು ಜಿಲ್ಲೆಯ ಸೌಂದರ್ಯಕ್ಕೆ ಧಕ್ಕೆ ತರುತ್ತಿದ್ದಾರೆ. ಪ್ಲಾಸ್ಟಿಕ್, ಕೊಳೆತ ಆಹಾರ ಪದಾರ್ಥಗಳು, ಶೂ, ಟ್ಯೂಬ್ ಲೈಟ್, ಸೀಸದ ಬಾಟಲ್, ಸ್ಯಾಣಿಟರಿ ನ್ಯಾಪ್ಕಿನ್ ಹೀಗೆ ವೈವಿಧ್ಯಮಯ ವಸ್ತುಗಳು ರಸ್ತೆಯ ಇಕ್ಕೆಲಗಳಲ್ಲಿ ಪ್ರದರ್ಶನಕ್ಕೆ ಇಟ್ಟ ಹಾಗೆ ಹರಡಿಕೊಂಡಿವೆ.
ಸಂಜೆ ಆದ ಬಳಿಕ ವ್ಯವಸ್ಥಿತವಾಗಿ ಎಲ್ಲಾ ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ತ್ಯಾಜ್ಯಗಳನ್ನು ಸುಡುವ ಅವೈಜ್ಞಾನಿಕ ಕಾರ್ಯ ನಡೆಯುತ್ತಿದೆ. ಪ್ಲಾಸ್ಟಿಕ್ ಸುಡಬಾರದು ಎಂದು ಸರ್ಕಾರ ಪದೇ ಪದೇ ಹೇಳುತ್ತಿದ್ದರೂ ಇದನ್ನು ಗಾಳಿಗೆ ತೂರಲಾಗುತ್ತಿದೆ. ಒಂದೆಡೆ ತ್ಯಾಜ್ಯ ಎಸೆದು ಊರಿನ ಸ್ವಚ್ಛತೆಗೆ ಧಕ್ಕೆ ಬಂದರೆ, ಮತ್ತೊಂದೆಡೆ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಕ್ಕೆ ಬೆಂಕಿ ಇಟ್ಟು ವಾಯು ಮಾಲಿನ್ಯ, ಶ್ವಾಸಕೋಶದ ಕಾಯಿಲೆಗಳಿಗೆ ಆಹ್ವಾನ ನೀಡುವ ಘಟನೆ ಉಪ್ಪೂರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ನಡೆಯುತ್ತಿದೆ ಎನ್ನುತ್ತಾರೆ ಸ್ಥಳೀಯರು.
ಸ್ಥಳೀಯಾಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಪೂರ್ಣ ವಿರಾಮ ಹಾಕದಿದ್ದರೆ ಉಡುಪಿ ಜಿಲ್ಲೆಯ ಸ್ವಚ್ಛತೆಗೆ ಇದೊಂದು ದೊಡ್ಡ ಕಪ್ಪುಚುಕ್ಕೆಯಾಗಲಿದೆ.