ಗಂಗೊಳ್ಳಿ, ಜ.21: ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರೀತಿ, ಶಿಸ್ತು ಇರಬೇಕು. ರಾಮಾಯಣ, ಮಹಾಭಾರತ ಹಾಗೂ ಪುರಾಣ ಮತ್ತು ಗ್ರಂಥಗಳಲ್ಲಿ ಅಡಕವಾಗಿ ಅನೇಕ ವಿಷಯಗಳು ಇಂದಿನ ಮಕ್ಕಳಿಗೆ ತಿಳಿದಿಲ್ಲ. ಪಠ್ಯ ಪುಸ್ತಕದಲ್ಲಿ ಇರುವ ವಿಷಯಗಳನ್ನು ಮಾತ್ರ ಮಕ್ಕಳಿಗೆ ಹೇಳಲಾಗುತ್ತಿದೆ. ಇದರಿಂದ ನಮ್ಮ ಇತಿಹಾಸ ನಮ್ಮ ಮಕ್ಕಳಿಗೆ ತಿಳಿಯುತ್ತಿಲ್ಲ. ಹೀಗಾಗಿ ಪುರಾಣಗಳನ್ನು, ಧಾರ್ಮಿಕ ಗ್ರಂಥಗಳನ್ನು ಪಠಣ ಮಾಡಬೇಕು. ಮುಂದಿನ ಪೀಳಿಗೆಗೆ ದಾರಿದೀಪವಾಗಬೇಕು ಎಂದು ಮಹಾಬಲೇಶ್ವರ ಐತಾಳ್ ಉಪ್ಪುಂದ ಹೇಳಿದರು.
ಸೇವಾ ಸಂಗಮ ನಿವೇದಿತಾ ಶಿಶು ಮಂದಿರ ಗಂಗೊಳ್ಳಿ ಆಶ್ರಯದಲ್ಲಿ ಬಿಲ್ಲವರ ಹಿತರಕ್ಷಣಾ ವೇದಿಕೆ ಗಂಗೊಳ್ಳಿ ಸಹಯೋಗದೊಂದಿಗೆ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ಟಿ. ವಿಮಲಾ ವಿ.ಪೈ ಸಭಾಂಗಣದಲ್ಲಿ ಜರಗಿದ ಅಜಿತ್ ಕುಮಾರ ಅವರ ಪುಣ್ಯತಿಥಿ ‘ಸೇವಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿ ಅವರು ಮಾತನಾಡಿದರು.
ಬಿಲ್ಲವರ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಗೋಪಾಲ ಬಿಲ್ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಸೇವಕ, ದಾನಿ ಆನಂದ ಬಿಲ್ಲವ ಅವರನ್ನು ಗೌರವಿಸಲಾಯಿತು. ಬಿಲ್ಲವರ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಬಿಲ್ಲವರ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಜಿ.ಆರ್. ಲಕ್ಷ್ಮಣ ಪೂಜಾರಿ, ಮಾತಾಜಿ ಪ್ರೇಮಾ ಮತ್ತು ರತ್ನ ಉಪಸ್ಥಿತರಿದ್ದರು. ಶಿಶು ಮಂದಿರದ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿದರು. ಸಂಚಾಲಕ ಡಾ.ಕಾಶೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಶು ಮಂದಿರದ ಸದಸ್ಯರಾದ ಭಾಸ್ಕರ ಎಚ್.ಜಿ., ಸವಿತಾ ಯು.ದೇವಾಡಿಗ, ಬಿ.ಲಕ್ಷ್ಮಿಕಾಂತ ಮಡಿವಾಳ, ವಿಜಯಶ್ರೀ ವಿ. ಆಚಾರ್ಯ, ವಸಂತಿ ಖಾರ್ವಿ ಗೌರವಿಸಿದರು. ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಕಾರ್ಯಕ್ರಮ ನಿರೂಪಿಸಿದರು. ಶಿಶು ಮಂದಿರದ ಕಾರ್ಯದರ್ಶಿ ಅಶ್ವಿತಾ ಜಿ.ಪೈ ವಂದಿಸಿದರು.