ಉಡುಪಿ, ಜ.18: ಶಾಂತಿ ಮತ್ತು ಪ್ರೀತಿಯ ಮೂಲಕ ಮಾನವ ಜನಾಂಗ ಉತ್ತಮ ದಾರಿಯೆಡೆಗೆ ಸಾಗಲು ಸಾಧ್ಯ. ಇದು ಎಲ್ಲಾ ಧರ್ಮಗಳ ಸಾರ ಎಂಬುದನ್ನು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ್ದಾರೆ. ಬಡವರು ಮತ್ತು ದೀನ ದಲಿತರ ಬಗ್ಗೆ ಅವರ ಚಿಂತನೆಗಳು ಗಮನ ಸೆಳೆಯುತ್ತವೆ. ಮಾನವೀಯ ಮೌಲ್ಯಗಳೇ ವಿವೇಕಾನಂದರು ಪ್ರತಿಪಾದಿಸಿದ ಮುಖ್ಯ ತತ್ವವಾಗಿದೆ. ಇದು ಜಾಗತಿಕ ಶಾಂತಿಗೆ ಕಾರಣವಾಗುತ್ತದೆ. ಈ ದೃಷ್ಟಿಯಿಂದ ವಿವೇಕಾನಂದರ ಚಿಂತನೆ ಹೆಚ್ಚು ಸಮಕಾಲೀನವಾಗಿದೆ ಎಂದು ಚಿಂತಕಿ ಡಾ. ನಿಕೇತನ ಪ್ರತಿಪಾದಿಸಿದ್ದಾರೆ. ಅವರು ನಗರದ ನೇತ್ರಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಾಯಿನ್ಸ್ ಕಾಲೇಜಿನ ಸಭಾಂಗಣದಲ್ಲಿ ನೇತ್ರಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಾಯಿನ್ಸ್ ಹಾಗೂ ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ವಿವೇಕಾನಂದ ಜಯಂತಿ- ರಾಷ್ಟ್ರೀಯ ಯುವದಿನಾಚರಣೆ ಮತ್ತು ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಿದ್ದರು.
ಕಾರ‍್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ಮಾತನಾಡಿ, ಭಾರತೀಯ ಚಿಂತನೆ ಮತ್ತು ಮೌಲ್ಯಗಳನ್ನು ಜಗತ್ತಿಗೆ ಸಾರಿದ ಕ್ರಾಂತಿಕಾರಿ ಸಂತ ಸ್ವಾಮಿ ವಿವೇಕಾನಂದ ಎಂದರು. ನೇತ್ರಜ್ಯೋತಿ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳಾದ ಡಾ. ಗೌರಿ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ರೆಡ್‌ಕ್ರಾಸ್ ಉಪ ಸಭಾಪತಿ ಡಾ. ಅಶೋಕ್ ಕುಮಾರ್ ವೈಜಿ, ಖಜಾಂಚಿ ರಮಾದೇವಿ, ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು, ಪ್ರಾಧ್ಯಾಪಕ ಶಹನಾಜ್, ಕಾಲೇಜಿನ ಕೋರ್ಡಿನೇಟರ್ ಸಚಿನ್ ಶೇಟ್ ಮತ್ತು ಮಾಧವ ಪೂಜಾರಿ, ರೆಡ್‌ಕ್ರಾಸ್ ಸ್ವಯಂಸೇವಕಿಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಪ್ರಾಧ್ಯಾಪಕಿ ರಕ್ಷಾ ಸ್ವಾಗತಿಸಿ, ಸ್ವಾತಿ ವಂದಿಸಿದರು.