ಉಡುಪಿ, ಜ.18: ಕರ್ನಾಟಕ ಕ್ರೀಡಾಕೂಟದ ಅಂಗವಾಗಿ ಜನವರಿ 19 ರಂದು ಸೈಕ್ಲಿಂಗ್ ಸ್ಪರ್ಧೆಯು ಬ್ರಹ್ಮಾವರ ತಾಲೂಕಿನ ಕೊಳಲಗಿರಿ ವಾಟರ್ ಟ್ಯಾಂಕ್‌ನಿಂದ ಪೆರ್ಡೂರು ಮಾರ್ಗದಲ್ಲಿ ಬರುವ ಕುಕ್ಕೆಹಳ್ಳಿ ಜಂಕ್ಷನ್ ಸಮೀಪದ ಶಾಂತಿವನ ಜಂಕ್ಷನ್ ವರೆಗೆ 10 ಕಿ.ಮೀ ವ್ಯಾಪ್ತಿಯಲ್ಲಿ ನಡೆಯಲಿರುವ ಹಿನ್ನೆಲೆ, ಅಂದು ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ರಾಜ್ಯಮಟ್ಟದ ಸೈಕಲ್ ಸ್ಪರ್ಧೆಯು ನಡೆಯುವ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.
ಪೆರ್ಡೂರು ಹಾವಂಜೆ-ಕೊಳಲಗಿರಿ, ಅಮ್ಮುಂಜೆ, ಉಪ್ಪೂರು ಮಾರ್ಗವಾಗಿ ರಾಷ್ರೀಯ ಹೆದ್ದಾರಿ 66 ಕ್ಕೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಹಿರಿಯಡ್ಕ-ಮಣಿಪಾಲ ಮಾರ್ಗವಾಗಿ ಉಡುಪಿಗೆ ತೆರಳಬೇಕು. ಪೇತ್ರಿಯಿಂದ ಪೆರ್ಡೂರು ಕಡೆಗೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಕರ್ಜೆ-ಅಲಂಗಾರು ಮಾರ್ಗವಾಗಿ ಪೆರ್ಡೂರು ಕಡೆಗೆ ತೆರಳಬೇಕು. ಪೇತ್ರಿಯಿಂದ ಕುಕ್ಕೆಹಳ್ಳಿಗೆ ಹೋಗುವ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 66 ರಿಂದ ಉಪ್ಪೂರು-ಉಗ್ಗೆಲಬೆಟ್ಟು-ನಂದಿನಿ ಕೆಎಂಎಫ್-ಕೊಳಲಗಿರಿ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 66 ರಿಂದ ಕೆ.ಜಿ.ರಸ್ತೆ, ಅಮ್ಮುಂಜೆ- ಕೊಳಲಗಿರಿ- ಹಾವಂಜೆ- ಕುಕ್ಕೆಹಳ್ಳಿ ಮಾರ್ಗದ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಿದೆ.