ಬೈಂದೂರು, ಜ.7: ದೇಶಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವ ಸೈನಿಕರಿಂದಾಗಿ ನಾವು ನೆಮ್ಮದಿಯಿಂದ ಬದುಕುತ್ತಿದ್ದೇವೆ. ಭಾರತೀಯ ಸೇನೆ ಯುವಕರಲ್ಲಿ ದೇಶಭಕ್ತಿಯ ಭಾವವನ್ನು ಮೂಡಿಸುವ ಭರಪೂರ ಪ್ರಯತ್ನ ಮಾಡುತ್ತದೆ. ಅಂತಹ ಅತ್ಯುತ್ತಮ ತರಬೇತಿ ವ್ಯವಸ್ಥೆ ನಮ್ಮ ಸೇನೆಯಲ್ಲಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಹೇಳಿದರು. ಅವರು ನಾಗೂರು ಶ್ರೀ ಕೃಷ್ಣ ಲಲಿತ ಕಲಾಮಂದಿರದಲ್ಲಿ ನಡೆದ ಲೇಖಕ, ಮಾಜಿ ಸೈನಿಕ ಬೈಂದೂರು ಚಂದ್ರಶೇಖರ ನಾವಡರ ಸೈನಿಕರ ನಿತ್ಯ ಬದುಕಿನ ಚಿತ್ರಣದ ‘ಕಂಟೋನ್ಮೆಂಟ್ ಕಥೆಗಳು’ ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.
‘ಸುರಭಿ’ ಬೈಂದೂರು ಅಧ್ಯಕ್ಷ ಆನಂದ ಮದ್ದೋಡಿ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ನಾವು ಮತ್ತು ನಮ್ಮ ಕುಟುಂಬ ಎಂಬ ಸ್ವಾರ್ಥದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ. ಸೈನಿಕರ ಆದರ್ಶವನ್ನು ನಮ್ಮ ಯುವ ಪೀಳಿಗೆಗೆ ತಲುಪಿಸಬೇಕಾಗಿದೆ ಎಂದರು. ರೇಡಿಯೋ ಕುಂದಾಪ್ರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮವನ್ನು ನಿರೂಪಿಸಿ, ಕೃತಿ ಪರಿಚಯ ಮಾಡಿದರು. ‘ಕಂಟೋನ್ಮೆಂಟ್ ಕಥೆಗಳು’ ಸಂಕಲನದಲ್ಲಿ ಕಾಣಸಿಗುವ ಸೈನ್ಯದ ಕಠಿಣ ಪಥದ ಎಡರು ತೊಡರುಗಳನ್ನು ಎದುರಿಸುವ ಸೈನಿಕರ ಮನಸ್ಸಿನ ತುಮುಲಗಳು-ತಾಕಲಾಟಗಳ ಚಿತ್ರಣವನ್ನು ಅವರು ಎಳೆ ಎಳೆಯಾಗಿ ತೆರೆದಿಟ್ಟರು. ಯೋಧರ ಆಸೆ-ಆಕಾಂಕ್ಷೆಗಳು, ವೃತ್ತಿ ಬದುಕಿನ ಸವಾಲುಗಳನ್ನೆಲ್ಲವನ್ನು ಮೆಟ್ಟಿ ನಿಲ್ಲುವ ಪರಿಯನ್ನು ಕಾರ್ಯಕ್ರಮದ ಮಧ್ಯೆ ಮಧ್ಯೆ ವಿನೂತನ ಶೈಲಿಯಲ್ಲಿ ಶೋತೃಗಳಿಗೆ ಮನ ಮುಟ್ಟುವಂತೆ ಪರಿಚಯಿಸಿದರು. ‘ಲಾವಣ್ಯ’ ಬೈಂದೂರು ಅಧ್ಯಕ್ಷ ನರಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಮಧುರ ನಾವಡ ಪ್ರಾರ್ಥಿಸಿದರು. ಲೇಖಕ ಬೈಂದೂರು ಚಂದ್ರಶೇಖರ ನಾವಡ ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.