ಕೋಟ, ಜ.6: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮೀಣ ಜನರ ಯೋಚನೆಗಳಿಗೆ ಶಕ್ತಿ ಮತ್ತು ಆಲೋಚನೆಗಳಿಗೆ ಸಾಮರ್ಥ್ಯ ತುಂಬಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಸಾಸ್ತಾನ ಐರೋಡಿಯ ಚೆನ್ನಕೇಶವ ಕಲ್ಯಾಣ ಮಂಟಪದಲ್ಲಿ ಭಾನುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬ್ರಹ್ಮಾವರ ತಾಲ್ಲೂಕು ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಜ್ಞಾನಾರ್ಜನೆಗೆ ಅನುಕೂಲ, ಆರೋಗ್ಯ, ಶಿಕ್ಷಣ, ಕೃಷಿಗೆ ಹೆಚ್ಚು ಒತ್ತು ನೀಡಿದ ಗ್ರಾಮಾಭಿವೃದ್ಧಿ ಯೋಜನೆ ದುರ್ಬಲರಾಗಿದ್ದ ಮಹಿಳೆಯರನ್ನು ಬಲಿಷ್ಟರನ್ನಾಗಿ ಮಾಡಿದೆ. ೩೫ವರ್ಷಗಳ ಹಿಂದೆ ಅಧಿಕಾರ ಅವಕಾಶದಿಂದ ವಂಚಿರಾಗಿದ್ದ ಮಹಿಳೆಯರು ಇಂದು ಗ್ರಾಮ ಪಂಚಾಯಿತಿಯಿಂದ ಹಿಡಿದು ಎಲ್ಲ ಕ್ಷೇತ್ರದಲ್ಲೂ ತನ್ನದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಕೀಳರಿಮೆಯನ್ನು ಬಿಟ್ಟು ಹೊರಗೆ ಬರುವ ದಾರಿಯನ್ನು ಕಲ್ಪಿಸಿಕೊಟ್ಟಿದೆ. ಆತ್ಮಸ್ಥೈರ್ಯ ತುಂಬಿಸಿದೆ ಎಂದು ಅವರು ಹೇಳಿದರು.
ಪ್ರಗತಿಬಂಧು ಸ್ವ ಸಹಾಯ ಸಂಘಗಳ ಪಾಂಡೇಶ್ವರ ವಲಯದ ಅಧ್ಯಕೆ ರಾಧಾ ಎಸ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಉಡುಪಿಯ ಜೀವನ ಕೌಶಲ್ಯದ ತರಬೇತುದಾರರಾದ ಜ್ಯೋತಿ ಪ್ರಶಾಂತ್ ಒತ್ತಡ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ವಿಷಯದ ಬಗ್ಗೆ ಮಾಹಿತಿ ನೀಡಿದರು. ಹಿರಿಯರಾದ ಕಾರ್ಕಡದ ಅಕ್ಕಯ್ಯ, ಯಡಬೆಟ್ಟಿನ ಲಕ್ಷ್ಮಿ ಮತ್ತು ಚಿಕ್ಕಮ್ಮ ಮರಕಾಲ್ತಿ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಪ್ರಮುಖರಾದ ನಟರಾಜ ಗಾಣಿಗ, ಸುಲತಾ ಹೆಗ್ಡೆ, ಚಂದ್ರಶೇಖರ ಪೂಜಾರಿ ಇದ್ದರು. ಯೋಜನೆಯ ಬ್ರಹ್ಮಾವರ ತಾಲ್ಲೂಕು ಯೋಜನಾಧಿಕಾರಿ ರಮೇಶ ಪಿ.ಕೆ ಸ್ವಾಗತಿಸಿ, ಕುಸುಮಾ ಹೆಬ್ಬಾರ್‌ಸಾಧನಾ ವರದಿ ವಾಚಿಸಿದರು.