ಉಡುಪಿ, ಡಿ.31: ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಆಚರಣಾ ಸಮಿತಿ ಹಾಗೂ ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಇವರ ಸಹಭಾಗಿತ್ವದಲ್ಲಿ ರಾಜಮಾತೆ ಅಹಲ್ಯಾ ಬಾಯಿ ಹೊಳ್ಕರ್ ಜನ್ಮ ತ್ರಿಶತಾಬ್ದಿ ಮಹೋತ್ಸವದ ಪ್ರಯುಕ್ತ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ ಜನವರಿ 1 ರಿಂದ 15ರವರೆಗೆ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ರಾಜಮಾತೆ, ತದನಂತರ ಮರಾಠಾ ಒಕ್ಕೂಟದ ಇಂದೋರ್‌ನ ಮಹಾರಾಣಿಯಾಗಿ, ಸಾದ್ವಿಯಾಗಿಯೂ ಮನೆಮಾತಾದ ರಾಜಮಾತೆ ಅಹಲ್ಯಬಾಯಿ ಹೋಳ್ಕರ್ ಅವರು ಮಹೇಶ್ವರವನ್ನು (ಮಧ್ಯಪ್ರದೇಶದಲ್ಲಿ) ಹೋಳ್ಕರ್ ರಾಜವಂಶದ ಕೇಂದ್ರವಾಗಿ ಸ್ಥಾಪಿಸಿದರು. ಭಾರತೀಯ ಇತಿಹಾಸದ ಜನಪ್ರಿಯ ಮಹಿಳಾ ಆಡಳಿತಗಾತಿಯಾಗಿ ಉತ್ತಮ ಆಡಳಿತ, ಸಾಮಾಜಿಕ ಕಲ್ಯಾಣ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಪ್ರಗತಿಯೊಂದಿಗೆ ಮಾನವೀಯ ಕೆಲಸಗಳಿಗೆ ಹೆಸರುವಾಸಿಯಾಗಿದ್ದರು. ಅವರು ವಿವಿಧ ದೇವಾಲಯಗಳು, ಘಾಟ್‌ಗಳು ಮತ್ತು ಧರ್ಮಶಾಲಾಗಳ ಮೂಲಕ ಭಾರತೀಯ ವಾಸ್ತುಶಿಲ್ಪದ ಬೆಳವಣಿಗೆಗೆ ಕೊಡುಗೆ ನೀಡಿದರು. ಅಹಲ್ಯಾಬಾಯಿಯ ಮಠ, ಅಥವಾ ದತ್ತಿ ಸಂಸ್ಥೆಗಳು ಭಾರತದಾದ್ಯಂತ ಪಸರಿಸಿತ್ತು ಹಾಗೂ ಅವರು ಸಾಧ್ವಿಯಾಗಿಯೂ ನೆನಪಿಸಲ್ಪಡುತ್ತಾರೆ. ಕೈಮಗ್ಗದ ಉದ್ಯಮದ ಮೂಲಕ ಸಹಸ್ರಾರು ಮಹಿಳೆಯರಿಗೆ ಉದ್ಯೋಗದಾತರಾಗಿ ‘ಮಾಹೇಶ್ವರಿ’ ಸೀರೆಗಳ ಏಳಿಗೆಗೂ ಕಾರಣರಾಗುತ್ತಾರೆ.
ಅವರ ಸ್ಮರಣಾರ್ಥ ಜರಗುವ ಈ ಕೈಮಗ್ಗ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆಯನ್ನು ದಿನಾಂಕ 1.1.2025 ರಂದು ಬೆಳಿಗ್ಗೆ 10:00 ಗಂಟೆಗೆ ಸರಿಯಾಗಿ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು (ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಉಡುಪಿ) ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉಡುಪಿಯ ಶಾಸಕ ಯಶ್ಪಾಲ್ ಸುವರ್ಣ ಮತ್ತು ಗೌರವ ಅತಿಥಿಗಳಾಗಿ ಡಾ. ಪುಷ್ಪಾ ಕಿಣಿ (ಮಕ್ಕಳ ತಜ್ಞರು, ಕೆಎಂಸಿ ಮಣಿಪಾಲ) ಇವರು ಭಾಗವಹಿಸಲಿದ್ದಾರೆ.
ವಿಶೇಷವಾಗಿ ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಇವರಿಂದ ಏಳಿಗೆ ಕಂಡ ಮಾಹೇಶ್ವರಿ ಸೀರೆಗಳು ಈ ಮೇಳದ ವಿಶೇಷ ಆಕರ್ಷಣೆಯಾಗಿದೆ. ಜೊತೆಗೆ ಉಡುಪಿ, ಇಳಕಲ್, ಕೋಲ್ಕತ್ತಾ, ವೆಂಕಟಗಿರಿ, ಮಧುಬನಿ, ಬಿಹಾರದ ಕಸೂತಿ, ಕೈ ನೇಯ್ಗೆ, ಸುಜನಿ, ಝಾರ್ಕಂಡ್ ನ ತಸರ್ ಸಿಲ್ಕ್, ಕಾಟನ್ ಸಿಲ್ಕ್, ಕೋಲಾರ ಸಿಲ್ಕ್, ಧಾರವಾಡ ಕಸೂತಿ, ಪೋಚಂಪಲ್ಲಿ, ಮಲಬಾರಿ ಸಿಲ್ಕ್, ಮೈಸೂರ್ ಕ್ರೇಪ್ ಸಿಲ್ಕ್, ಕಾಶ್ಮೀರ, ಲಡಾಕ್, ಮೊಳಕಾಲ್ಮುರು, ಹುಬ್ಬಳ್ಳಿ ಕಾಟನ್, ಕೊಳ್ಳೇಗಾಲ ಸಿಲ್ಕ್, ಸೀರೆಗಳು, ಪಶ್ಮಿನ, ಕಲಂಕಾರಿ, ಮಧುಬನಿ, ಜಾರ್ಕಂಡ್ ಶಾಲು ಮತ್ತು ಡ್ರೆಸ್ ಮೆಟೀರಿಯಲ್ಸ್, ಮಟ್ಕಾ ಸಿಲ್ಕ್, ತಸರ್ ಸಿಲ್ಕ್, ಎರಿ ಸಿಲ್ಕ್ ಸೀರೆ, ಶಾಲು, ಡ್ರೆಸ್ ಮೈಸೂರ್, ತುಮ್ಮಿನಕಟ್ಟಿ, ಗುತ್ತೂರ್ ಟವೆಲ್, ಬೆಡ್ ಶೀಟ್, ಲುಂಗಿ, ಶರ್ಟ್ ಗಳು ಲಭ್ಯ ಇವೆ ಎಂದು ರಾಜಮಾತೆ ಅಹಲ್ಯಾಬಾಯಿ ಹೋಳ್ಕರ್ ಜನ್ಮತ್ರಿಶತಾಬ್ದಿ ಮಹೋತ್ಸವ ಆಚರಣಾ ಸಮಿತಿ ಮತ್ತು ಪದ್ಮಶಾಲಿ ನೇಕಾರ ಪ್ರತಿಷ್ಠಾನ (ರಿ.) ಉಡುಪಿ ಇವರ ಪ್ರಕಟಣೆ ತಿಳಿಸಿದೆ.