ಉಡುಪಿ, ಡಿ.31: 120 ವರ್ಷಗಳ ಇತಿಹಾಸದೊಂದಿಗೆ ಉಡುಪಿಯ ಪ್ರತಿಷ್ಠಿತ ಸಂಸ್ಕೃತ ಕಾಲೇಜು ವಾರ್ಷಿಕೋತ್ಸವದೊಂದಿಗೆ ಸಂಸ್ಕೃತೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಷ್ಟೊಂದು ದೀರ್ಘ ಇತಿಹಾಸದ ಸಂಸ್ಥೆಗಳು ಸಿಗುವುದೇ ಅತ್ಯಂತ ವಿರಳ. ಹೀಗಿರುವಾಗ ದೇಶಕ್ಕೆ ಅನೇಕ ಮಹಾಮಹಿಮ ಯತಿಗಳನ್ನು, ಹಿರಿಯ ಪಂಡಿತರನ್ನು, ಸುಸಂಸ್ಕೃತ ಅಧ್ಯಾಪಕರನ್ನು ಮತ್ತು ಉತ್ತಮ ನಾಗರಿಕರನ್ನು ನೀಡಿದ ಈ ಸಂಸ್ಥೆಯ 120ನೇ ವರ್ಷದ ಆಚರಣೆಯನ್ನು ವಿಶಿಷ್ಟವಾಗಿ ಆಚರಿಸಬೇಕು. ಇದಕ್ಕಾಗಿ ಪರ್ಯಾಯ ಮಠದ ಎಲ್ಲಾ ಸಹಕಾರವಿದೆ. ಸಂಸ್ಥೆಯ ಹಳೆ ವಿದ್ಯಾರ್ಥಿಗಳೂ ಕೈ ಜೋಡಿಸಿ ಕಾರ್ಯಕ್ರಮವನ್ನು ರೂಪಿಸಬೇಕಾಗಿದೆ ಎಂದು ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣಮಠದ ದಿವಾನರಾದ ವಿದ್ವಾನ್ ಪ್ರಸನ್ನಾಚಾರ್ಯರು ಕರೆ ನೀಡಿದರು.
ಮಂಗಳವಾರ ಉಡುಪಿಯ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತೋತ್ಸವ ಪ್ರಯುಕ್ತ ಸಂಸ್ಕೃತ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸಿ ಸಂಸ್ಕೃತದ ಲಾಭವನ್ನು ಪಡೆದುಕೊಳ್ಳುವಂತಾಗಲಿ. ಇದೊಂದು ಸದವಕಾಶವಾಗಿದೆ. ತಮಗೆಲ್ಲಾ ಒಳಿತಾಗಲಿ ಎಂದು ಆಶಿಸಿದರು. ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ಸತ್ಯನಾರಾಯಣ ಆಚಾರ್ಯರು ಉತ್ಸವದ ಉದ್ದೇಶ ಜನರನ್ನು ಅಭಿಮುಖೀ ಗೊಳಿಸುವುದು. ನಿತ್ಯಕಾಯಕದಲ್ಲೇ ದಿನವನ್ನು ಕಳೆಯುತ್ತಿರುವಾಗ ಉತ್ಸವ ಬಂತೆಂದರೆ ಅತ್ತಕಡೆ ಜನ ಗಮನ ಹರಿಸುತ್ತಾರೆ. ಅದರಂತೆ ಜನರನ್ನು ಸಂಸ್ಕೃತದತ್ತ ಸೆಳೆಯುವುದಕ್ಕಾಗಿ ಈ ಸಂಸ್ಕೃತೋತ್ಸವವನ್ನು ಆಚ್ರಿಸಲಾಗುತ್ತಿದೆ. ಅದಕ್ಕಾಗಿ ನಾನಾ ಪ್ರೌಢಶಾಲೆಗಳಿಂದ ಮತ್ತು ಸಂಘಸಂಸ್ಥೆಗಳಿಂದ ಸ್ಪರ್ಧಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ಶ್ರೀಕರ ಉಪಾಧ್ಯಾಯ ಪ್ರಾರ್ಥಿಸಿದರು. ವಿದ್ವಾನ್ ಅನಿಲ ಜೋಶಿ ವಂದಿಸಿದರು. ಡಾ. ಮಹೇಂದ್ರ ಸೋಮಯಾಜೀ ಕಾರ್ಯಕ್ರಮ ನಿರ್ವಹಿಸಿದರು.