ಕಾರ್ಕಳ, ಡಿ.26: ಜ್ಞಾನಸುಧಾ ಕಾರ್ಕಳದ ಆಸ್ತಿಯಾಗಿದ್ದು, ಸಂಸ್ಕಾರ, ಸದ್ವಿಚಾರದ ಅಡಿಪಾಯವನ್ನು ಶಿಕ್ಷಣದ ಜೊತೆಗೆ ನೀಡುತ್ತಿರುವ ಇಲ್ಲಿನ ಕಾರ್ಯ ಶ್ಲಾಘನೀಯ. ಡಾ.ಸುಧಾಕರ್ ಶೆಟ್ಟಿಯವರ ತಂಡದ ಸಂಘಟಿತ ಪ್ರಯತ್ನ ಪ್ರಶಂಸನೀಯ. ವಿದ್ಯಾರ್ಥಿಗಳು ನವಭಾರತವನ್ನು ನಿರ್ಮಿಸುವುದಕ್ಕಾಗಿ ಸಂಕಲ್ಪತೊಡಬೇಕು ಎಂದು ಶಾಸಕ ವಿ.ಸುನಿಲ್ ಕುಮಾರ್ ಹೇಳಿದರು. ಅವರು ಗಣಿತನಗರದ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದಲ್ಲಿ ಡಿಸೆಂಬರ್ 22 ರಂದು ನಡೆದ ಜ್ಞಾನಸುಧ ಸಂಸ್ಥಾಪಕರ ಹಾಗೂ ರಾಷ್ಟ್ರೀಯ ಗಣಿತ ದಿನಾಚರಣೆ ಮತ್ತು ಸಾಧಕ ವಿದ್ಯಾರ್ಥಿಳಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿದ್ದ ಎಂ.ಆರ್.ಜಿ.ಗ್ರೂಪ್‌ಗಳ ಸಂಸ್ಥಾಪಕ ಹಾಗೂ ಉದ್ಯಮಿಗಳಾದ ಕೆ. ಪ್ರಕಾಶ್ ಶೆಟ್ಟಿಯವರು, ಸಮಾಜದ ಋಣವನ್ನು ತೀರಿಸುವ ಕೆಲಸ ನಮ್ಮಿಂದಾದಾಗ ಬದುಕು ಸಾರ್ಥಕ. ಅಂತಹ ಮಾದರಿಗಳನ್ನು ತೋರಿಸುತ್ತಿರುವ ಜ್ಞಾನಸುಧಾದ ಕಾರ್ಯ ಆದರ್ಶನೀಯ. ಜ್ಞಾನಸುಧಾ ಜ್ಞಾನದ ಭಂಡಾರವಾಗಿದೆ. ಇಲ್ಲಿನ ಕಾರ್ಯ ರಾಷ್ಟ್ರಕ್ಕೆ ಮಾದರಿ. ಡಾ.ಸುಧಾಕರ್ ಶೆಟ್ಟಿಯವರಿಂದ ಶಿಕ್ಷಣದ ಕ್ರಾಂತಿ ನಡೆಯುತ್ತಿದೆ ಎಂದರು.
ವಿದ್ಯಾರ್ಥಿಗೆ ಸಮಯ ಪ್ರಜ್ಞೆ ಮುಖ್ಯ: ಪ್ರಸನ್ನ ಹೆಚ್. ಐ.ಎ.ಎಸ್.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ತಾಂತ್ರಿಕ ಶಿಕ್ಷಣದ ನಿರ್ದೇಶಕರಾದ ಪ್ರಸನ್ನ ಹೆಚ್. ಐ.ಎ.ಎಸ್. ಮಾತನಾಡುತ್ತಾ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗೆ ಸಮಯ ಪ್ರಜ್ಞೆ ಮುಖ್ಯ. ನಿರಂತರವಾದ ಓದು ಯಶಸ್ಸಿಗೆ ದಾರಿ ಮಾಡಿಕೊಡುತ್ತದೆ. ಹಿಂಜರಿಕೆ ಬಿಟ್ಟು ಗುರಿಕಡೆಗೆ ಗಮನ ಕೊಟ್ಟಾಗಲೇ ವಿದ್ಯಾರ್ಥಿ ಕನಸು ನನಸಾಗಲು ಸಾಧ್ಯ. ಬದ್ದತೆ ಹಾಗೂ ಪೂರ್ವಭಾವಿ ಸಿದ್ಧತೆಯನ್ನು ಒಳಗೊಂಡ ಜ್ಞಾನಸುಧಾದ ವೇಳಾಪಟ್ಟಿಯು ವಿದ್ಯಾರ್ಥಿಯ ಶೈಕ್ಷಣಿಕ ಅಭ್ಯುದಯಕ್ಕೆ ಪೂರಕವಾಗಿದೆ ಎಂದರು.
ಕಾರ್ಯನಿಷ್ಟೆ ಇದ್ದಾಗ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ.ಗೌತಮ್ ಭಟ್
ಸಂಸ್ಥೆಯ ಪೂರ್ವ ವಿದ್ಯಾರ್ಥಿ ಐ.ಎಂಎಸ್.ಬನಾರಸ್,ವಾರಣಸಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಗೌತಮ್ ಭಟ್ ಎಂ.ಬಿ.ಬಿ.ಎಸ್. ಎಂ.ಎಸ್. ಎಂ.ಸಿಹೆಚ್.(ಸರ್ಜಿಕಲ್ ಆಂಕೋಲಜಿ) ಮಾತನಾಡುತ್ತಾ, ಕನಸು ದೊಡ್ಡದಾಗಿದ್ದು, ಕಾರ್ಯನಿಷ್ಟೆ ಇದ್ದಾಗ, ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನುತ್ತಾ ತಾವು ಕಾಲೇಜಿನಲ್ಲಿ ಕಳೆದ ನೆನಪುಗಳನ್ನು ಹಂಚಿಕೊಂಡರು. ಇದೇ ಸಂದರ್ಭ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 2023-24ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆ.ಇ.ಇ ಅಡ್ವಾನ್ಸ್ಡ್ ಮೂಲಕ ಐ.ಐ.ಟಿ ಪ್ರವೇಶ ಪಡೆದ ಮೂವರು ವಿದ್ಯಾರ್ಥಿಗಳನ್ನು, ಜೆ.ಇ.ಇ ಮೈನ್ಸ್ ಮೂಲಕ ಎನ್.ಐ.ಟಿ ಪ್ರವೇಶ ಪಡೆದ ಎಂಟು ವಿದ್ಯಾರ್ಥಿಗಳನ್ನು, ನೀಟ್ ಮೂಲಕ ಎಂ.ಬಿ.ಬಿ.ಎಸ್. ಪ್ರವೇಶಗಳಿಸಿದ 155 ವಿದ್ಯಾರ್ಥಿಗಳನ್ನು, ಸಿ.ಎ. ಫೌಂಡೇಶನ್‌ನಲ್ಲಿ ತೇರ್ಗಡೆಗೊಂಡ ನಾಲ್ವರು ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ ಸಂಸ್ಥೆಯ ಮೂವರು ವಿದ್ಯಾರ್ಥಿಗಳನ್ನು, ಹಾಗೂ ಕಳೆದ ಮೂರು ವರ್ಷಗಳಲ್ಲಿ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹನ್ನೊಂದು ಪೂರ್ವ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ದೇಣಿಗೆ ಹಸ್ತಾಂತರ
ಪ್ರತಿ ಎಂ.ಬಿ.ಬಿ.ಎಸ್ ಸೀಟ್‌ಗೆ (155) ರೂ.2000/- ದಂತೆ ಭಾರತೀಯ ಸೇನೆಗೆ ರೂ.3,10,000/-ವನ್ನು ದೇಣಿಗೆಯನ್ನು ಹಸ್ತಾಂತರಿಸಲಾಯಿತು. 3ನೇ ಹಂತದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಇದೀಗ 7,47,500ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟಿ ಅನಿಲ್ ಕುಮಾರ್ ಜೈನ್ ವಂದಿಸಿದರು.