ಉಡುಪಿ, ಡಿ.26: ಹೋಂ ಡಾಕ್ಟರ್ ಫೌಂಡೇಶನ್ ಇದರ ಸ್ವರ್ಗ ಆಶ್ರಮ ಕೊಳಲಗಿರಿ ಚರ್ಚ್ ಎದುರಿನ ಶಾಲಾ ಕಟ್ಟಡದಲ್ಲಿ ಡಿ.25ರಂದು ಪ್ರಾರಂಭವಾಯಿತು. ದಶಮಾನೋತ್ಸವ ಸಂಭ್ರಮದಲ್ಲಿ ಸಂಸ್ಥೆಯು ಕಳೆದ 10 ವರ್ಷಗಳಲ್ಲಿ ಸುಮಾರು 2 ಕೋಟಿ ರೂ ಮೊತ್ತದ ಸೇವಾ ಕಾರ್ಯಗಳನ್ನು ವಿವಿಧ ಕಾನ್ಸೆಫ್ಟ್ ಅಡಿಯಲ್ಲಿ ನಡೆಸುತ್ತಾ ಬಂದಿದ್ದು, ಸಮಾಜದ ನಿರ್ಗತಿಕರಿಗೆ, ಅಸಹಾಯಕರಿಗೆ, ದಿವ್ಯಾಂಗರಿಗೆ ಮತ್ತು ಮಾನಸಿಕ ಅಸ್ವಸ್ಥರಿಗೆ ಉಚಿತವಾಗಿ ಈ ಆಶ್ರಮ ಆಶ್ರಯ ಒದಗಿಸಲಿದೆ. ಆಶ್ರಮದ ಉದ್ಘಾಟನೆಯನ್ನು ಡಿ.25ರಂದು ಸಂಸ್ಥೆಯ ಪ್ರವರ್ತಕರಾದ ಡಾ. ಶಶಿಕಿರಣ್ ಶೆಟ್ಟಿ ನೆರವೇರಿಸಿ ಮಾತನಾಡಿ, ಸಂಸ್ಥೆಯ ವತಿಯಿಂದ ನಡೆಯುವ ಈ ಆಶ್ರಮ ನಮ್ಮ ಹಲವಾರು ವಷ೯ಗಳ ಕನಸಾಗಿತ್ತು. ಸುಮಾರು 36 ಜನರಿಗೆ ವ್ಯವಸ್ಥೆಯಿದ್ದು, ಮುಂದಿನ ದಿನಗಳಲ್ಲಿ ದಾನಿಗಳ ಸಹಕಾರದೊಂದಿಗೆ ಮತ್ತಷ್ಟು ವಿಸ್ತರಿಸುವ ಯೋಜನೆಯಿದೆ. ಸಂಸ್ಥೆಯ ಸುಮಾರು 3 ಸಾವಿರ ಮಂದಿ ಸದಸ್ಯರ ಸಹಕಾರದೊಂದಿಗೆ ಸಾಮಾಜಿಕ ಜಾಲ ತಾಣ ಉಪಯೋಗಿಸಿ ಹಲವಾರು ಸಾಮಾಜಿಕ ಕಾರ್ಯ ನಡೆಸಲಾಗಿದೆ ಎಂದರು.
ವೇದಿಕೆಯಲ್ಲಿ ಡಾ. ಸುಮಾ ಶೆಟ್ಟಿ, ಆಶ್ರಮದ ನಿರ್ವಾಹಕರಾದ ಮಹೇಶ್, ಹರೀಶ್, ಸದಸ್ಯರಾದ ಸುರೇಂದ್ರ ಪೂಜಾರಿ, ಬಂಗಾರಪ್ಪ, ಉದಯ್ ನಾಯ್ಕ್, ಶಂಕರ ನಾಯಕ್, ಪ್ರದೀಪ್, ಸುಂದರ ಪೂಜಾರಿ, ರವಿ ಕೊಳಲಗಿರಿ ಮುಂತಾದವರಿದ್ದರು. ರಾಘವೇಂದ್ರ ಕರ್ವಾಲು ನಿರೂಪಿಸಿದರು.