ಕೋಟ, ಡಿ.26: ಮಕ್ಕಳಲ್ಲಿ ಆರೋಗ್ಯ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಆಗಾಗ ಅರಿವು ಮೂಡಿಸುವ ಪಂಚವರ್ಣ ಮಹಿಳಾ ಮಂಡಲದ ಅರಿವು ಸರಣಿ ಕಾರ್ಯಕ್ರಮ ಶ್ಲಾಘನೀಯ ಎಂದು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಹೇಳಿದರು. ಬುಧವಾರ ಕೋಟ ವಿವೇಕ ವಿದ್ಯಾಸಂಸ್ಥೆಯ ಮಹಾತ್ಮಗಾಂಧಿ ಸಭಾಂಗಣದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಮಾತೃಸಂಸ್ಥೆ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಅರಿವು ನಿಮಗಿರಲಿ ನೆರವು 12 ನೇ ಸರಣಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಯುರ್ವೇದ ವೈದ್ಯೆ ಡಾ.ವಾಣಿಶ್ರೀ ಐತಾಳ್ ಪ್ರಸ್ತುತ ಮಕ್ಕಳಲ್ಲಿ ಉದ್ಭವಿಸುತ್ತಿರುವ ಆರೋಗ್ಯ ಸಮಸ್ಯೆ, ಮೊಬೈಲ್ ಗೀಳು, ಪೋಷಕರು ಮತ್ತು ಮಕ್ಕಳಲ್ಲಿ ಇರುವ ಸಂಬಂಧಗಳ ಬಗ್ಗೆ ವಿಸ್ತೃತವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು. ಪಂಚವರ್ಣ ಯುವಕ ಮಂಡಲದ ನೂತನ ಉಪಾಧ್ಯಕ್ಷ ದಿನೇಶ್ ಆಚಾರ್ ಉಪಸ್ಥಿತರಿದ್ದರು. ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಗದೀಶ ಹೊಳ್ಳ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ನರೇಂದ್ರ ಕುಮಾರ್ ಕೋಟ ವಂದಿಸಿದರು.