ಬ್ರಹ್ಮಾವರ, ಡಿ.23: ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬ್ರಹ್ಮಾವರ ಸಮೀಪದ ಅಪ್ಪ ಅಮ್ಮ ಅನಾಥಾಶ್ರಮದ ನಿವಾಸಿಗಳೊಂದಿಗೆ ಕ್ರಿಸ್ಮಸ್ ಆಚರಣೆ ಕಾರ್ಯಕ್ರಮ ಜರುಗಿತು. ಕೇಕ್ ಕತ್ತರಿಸುವುದರ ಮೂಲಕ ಉದ್ಘಾಟಿಸಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಶ್ ಕರ್ನೆಲೀಯೋ ಮಾತನಾಡಿ, ಯೇಸುಕ್ರಿಸ್ತರು ಈ ಧರೆಗೆ ಮಾನವರಾಗಿ ಜನಿಸಿ ಅಶಕ್ತರು, ನೊವುಂಡವರ ಏಳಿಗೆಗಾಗಿ ತನ್ನ ಜೀವನದ ಕೊನೆಯ ವರೆಗೂ ಶ್ರಮಿಸಿದರು. ಕ್ರಿಸ್ಮಸ್ ಹಬ್ಬ ನಮ್ಮಲ್ಲಿ ಇರುವುದನ್ನು ಪರರೊಂದಿಗೆ ಹಂಚಿಕೊಂಡು ಹಬ್ಬದ ಆಚರಣೆ ಮಾಡುವ ಸಂದೇಶವನ್ನು ಸಾರುತ್ತದೆ. ಪರಸ್ಪರ ಸಂತೋಷವನ್ನು ಹಂಚುವ ಮೂಲಕ ಹಬ್ಬವನ್ನು ಆಚರಿಸಿದಾಗ ಕ್ರಿಸ್ಮಸ್ ಹಬ್ಬಕ್ಕೆ ನಿಜವಾದ ಅರ್ಥ ಬರಲು ಸಾಧ್ಯವಿದ್ದು ಈ ನಿಟ್ಟಿನಲ್ಲಿ ಸಂಘಟನೆ ಅನಾಥರಾಗಿರುವ ವೃದ್ದರು ತಮ್ಮವರೆಂಬ ಭಾವನೆಯೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಆಚರಿಸಿದೆ ಎಂದರು. ಸಂಘಟನೆಯ ವತಿಯಿಂದ ಆಶ್ರಮ ವಾಸಿಗಳ ಊಟದ ಖರ್ಚಿಗಾಗಿ ರೂ 20000 ಧನ ಸಹಾಯವನ್ನು ಹಸ್ತಾಂತರಿಸಲಾಯಿತು. ಹಬ್ಬದ ಆಚರಣೆಯ ಪ್ರಯುಕ್ತ ಆಶ್ರಮವಾಸಿಗಳಿಗೆ ವಿಶೇಷ ಊಟದ ವ್ಯವಸ್ಥೆಯನ್ನು ಮಾಡಲಾಯಿತು.
ಕಥೊಲಿಕ್ ಸಭಾ ಉಡುಪಿ ಪ್ರದೇಶದ ನಿಯೋಜಿತ ಅಧ್ಯಕ್ಷರಾದ ರೋನಾಲ್ಡ್ ಡಿ’ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಪದಾಧಿಕಾರಿ ಶಾಂತಿ ಪಿರೇರಾ, ಕಲ್ಯಾಣಪುರ ವಲಯಾಧ್ಯಕ್ಷೆ ರೋಜಿ ಕ್ವಾಡ್ರಸ್, ಬ್ರಹ್ಮಾವರ ಘಟಕಾಧ್ಯಕ್ಷರಾದ ಜೊಯೇಲ್ ಡಿ’ಆಲ್ಮೇಡಾ, ಕೋಶಾಧಿಕಾರಿ ಸ್ಟ್ಯಾನಿ ಡಿಸೋಜಾ ಉಪಸ್ಥಿತರಿದ್ದರು.