ಉಡುಪಿ, ಡಿ.22: ಆದಿ ಉಡುಪಿ ಮಲ್ಪೆ ರಾಷ್ಟ್ರೀಯ ಹೆದ್ದಾರಿ 169 ಎ ಅಭಿವೃದ್ಧಿ ಕಾಮಗಾರಿಗಾಗಿ ಭೂಸ್ವಾಧೀನಗೊಂಡಿರುವ ಜಾಗಗಳ ಪರಿಹಾರ ಮೊತ್ತಕ್ಕಾಗಿ ದಾಖಲೆ ಸಲ್ಲಿಸಿದ 24 ಭೂ ಮಾಲೀಕರಿಗೆ ರೂ. 2.83 ಕೋಟಿ ಪರಿಹಾರ ಮೊತ್ತವನ್ನು ಬ್ಯಾಂಕ್ ಖಾತೆಗೆ ಜಮೆಮಾಡಲಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಮಲ್ಪೆ ಆದಿ ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ 214 ಭೂಸ್ವಾಧೀನ ಪ್ರಕ್ರಿಯೆ ನಡೆಸಲಾಗಿದ್ದು, ಅದರಲ್ಲಿ 19 ಸರಕಾರಿ ಜಾಗವಾಗಿರುತ್ತದೆ. ಉಳಿದ 195 ಜಾಗಗಳ ಪೈಕಿ 103 ಕ್ಲೈಮ್ ಗಳನ್ನು ಸ್ವೀಕರಿಸಲಾಗಿದ್ದು, ಪರಿಹಾರ ಪಾವತಿಗೆ ಕ್ರಮ ವಹಿಸಲಾಗಿದೆ. 44 ಭೂ ಮಾಲೀಕರು ದಾಖಲೆಗಳನ್ನು ಸಲ್ಲಿಸಲು ಬಾಕಿಯಿದೆ.
ನಿಯಮಾನುಸಾರ 214 ಪ್ರಕರಣಗಳ ಎಲ್ಲಾ ಭೂಸ್ವಾದೀನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪರಿಹಾರ ಮೊತ್ತ ಪಡೆಯಲು ಬಾಕಿಯಿರುವ ಭೂ ಮಾಲೀಕರು ಕೂಡಲೇ ದಾಖಲೆಗಳನ್ನು ಸಲ್ಲಿಸುವಂತೆ ತಿಳಿಸಿದ್ದಾರೆ.
ಮಲ್ಪೆ ಆದಿ ಉಡುಪಿ ರಾಷ್ಟೀಯ ಹೆದ್ದಾರಿ ಕಾಮಗಾರಿಗೆ ವಿಶೇಷ ಸಹಕಾರ ನೀಡಿದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಯವರಿಗೆ ಉಡುಪಿ ಜನತೆಯ ಪರವಾಗಿ ವಿಶೇಷ ಧನ್ಯವಾದ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.