ಉಡುಪಿ, ಡಿ.21: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ ಇವರ ಸಹಯೋಗದಲ್ಲಿ ನಲ್ ಜಲ್ ಮಿತ್ರ ಬಹು ಕೌಶಲ್ಯ ತರಬೇತಿ ಕಾರ್ಯಕ್ರಮವು ಇಂದು ನಗರದ ಉಪ್ಪೂರಿನ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ನಡೆಯಿತು. ಹದಿನೇಳು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಶ್ರೀನಿವಾಸ್ ರಾವ್ ಮಾತನಾಡಿ, ಜಲ್ ಜೀವನ್ ಮಿಷನ್ ಮೂಲಕ ಜಿಲ್ಲೆಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರನ್ನು ಒದಗಿಸುವ ಗುರಿ ಹೊಂದಲಾಗಿದೆ. ಗ್ರಾಮ ಪಂಚಾಯತ್‌ನ ಎರಡು ಸಂಜೀವಿನಿ ಸ್ವ-ಸಹಾಯ ಗುಂಪಿನ ಮಹಿಳೆಯರಿಗೆ ಬಹು ಕೌಶಲ್ಯ ತರಬೇತಿ ನೀಡಿ ನಲ್ ಜಲ್ ಮಿತ್ರರನ್ನಾಗಿ ಗ್ರಾಮ ಪಂಚಾಯತ್‌ಗೆ ನಿಯೋಜಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಜಲ್ ಜೀವನ್ ಮಿಷನ್ ಸಾರಥ್ಯವನ್ನು ಸಂಜೀವಿನಿ ಮಹಿಳೆಯರು ವಹಿಸಲಿದ್ದಾರೆ ಎಂದರು.
ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಇಬ್ರಾಹಿಂಪುರ್, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಪ್ರಾಂಶುಪಾಲ ಮಂಜುನಾಥ್ ನಾಯಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಉದಯ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಪಂಚಾಯತ್‌ನ ಸಹಾಯಕ ನಿರ್ದೇಶಕ ಮಹೇಶ್, ನಲ್ ಜಲ್ ಮಿತ್ರ ತರಬೇತಿದಾರ ದುರ್ಗಪ್ರಸಾದ್, ಜಲ್ ಜೀವನ್ ಮಿಷನ್ ಜಿಲ್ಲಾ ಸಂಯೋಜಕ ಸುಧೀರ್, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ತಾಲೂಕು ಮೇಲ್ವಿಚಾರಕರಾದ ಸ್ವಾತಿ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.