ಉಡುಪಿ, ಡಿ.20: ಅರ್ಥಶಾಸ್ತ್ರ ಉಪನ್ಯಾಸಕಿ ಗಿರಿಜಾ ಹೆಗ್ಡೆ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಉಡುಪಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ 2024ರ ವಿಶ್ವ ಹವ್ಯಕ ಸಮ್ಮೇಳನದಲ್ಲಿ ‘ಶಿಕ್ಷಕ ರತ್ನ’ ಪ್ರಶಸ್ತಿಯನ್ನು ಇದೇ ಬರುವ ಡಿಸೆಂಬರ್ 28 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ಸಮಾರಂಭದಲ್ಲಿ ಕೊಡಮಾಡಲಾಗುತ್ತಿದೆ. ವೃತ್ತಿಯಲ್ಲಿ 25 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಇವರು ಎಂ.ಎ.(ಅರ್ಥಶಾಸ್ತ್ರ), ಎಂ.ಫಿಲ್(ಉತ್ತರಕನ್ನಡ ಕೈಗಾರಿಕೆಗಳ ಪ್ರಗತಿ), ಎಂ.ಬಿ.ಎ.(ಹೆಚ್ ಆರ್), ಬಿ.ಎಡ್. ಸ್ಲೆಟ್ ಪರೀಕ್ಷೆ ಪಾಸಾಗಿರುತ್ತಾರೆ. ನಿಮ್ಹಾನ್ಸ್ ಕೊಡಮಾಡುವ ಒಂದು ವಾರದ ಜೀವನಕೌಶಲ್ಯ ತರಬೇತಿ ಪಡೆದಿದ್ದಾರೆ.
ಇವರು ಪ್ರಕಟಿಸಿದ ಕೃತಿಗಳು- ಅನಾವರಣ ಕವನ ಸಂಕಲನ, ಕಾರ್ನಾಡ್ ಸದಾಶಿವ ರಾವ್ ಸ್ಮಾರಕ ಪ್ರಶಸ್ತಿ ಪಡೆದಿದೆ. ಅಗಸೆಬಾಗಿಲು- ಕವನ ಸಂಕಲನ ನತ್ತು- ಕಥಾ ಸಂಕಲನದ ಕಥೆಗೆ ಕೊಡಗಿನ ಗೌರಮ್ಮ ದತ್ತಿ ನಿಧಿ ಪ್ರಶಸ್ತಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಮಹಿಳಾ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ ಮಂಗಳೂರು ಮತ್ತು ಮಣಿಪಾಲ ಆಕಾಶವಾಣಿಯಲ್ಲಿ ಇವರ ಕಥೆ ಕವನ ಬಿತ್ತರಗೊಂಡಿದೆ. ಸ್ಥಳೀಯ ಟಿವಿ ಚಾನಲ್ಗಳಲ್ಲಿ ಇವರ ಸಂರ್ದರ್ಶನ ಮೂಡಿಬಂದಿದೆ. ಅರ್ಥಶಾಸ್ತ್ರದ ಉಡುಪಿ ಜಿಲ್ಲಾ ಪರೀಕ್ಷಾ ಮಿತ್ರ ಕೈಪಿಡಿಯ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದ್ದಾರೆ. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಲೇಖನಗಳನ್ನೂ ಅಂತರಾಷ್ಟ್ರೀಯ ಪತ್ರಿಕೆಗಳಲ್ಲಿ ಬರೆದು ಪ್ರಕಟಿಸಿರುತ್ತಾರೆ. ಉಡುಪಿಯಲ್ಲಿ ಪತಿ ಮತ್ತು ಮಗನೊಂದಿಗೆ ನೆಲೆಸಿದ್ದು, ತಮಗೆ ಬಂದಿರುವ ಈ ಪ್ರಶಸ್ತಿಯನ್ನು ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಅರ್ಪಿಸಿದ್ದಾರೆ.