Thursday, December 19, 2024
Thursday, December 19, 2024

ಗೃಹರಕ್ಷಕ ದಳದವರ ಉತ್ತಮ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ

ಗೃಹರಕ್ಷಕ ದಳದವರ ಉತ್ತಮ ಕಾರ್ಯಕ್ಕೆ ಜಿಲ್ಲಾಧಿಕಾರಿ ಶ್ಲಾಘನೆ

Date:

ಉಡುಪಿ, ಡಿ.18: ತುರ್ತು ಸಂದರ್ಭ, ಪ್ರಾಕೃತಿಕ ವಿಕೋಪ ಸೇರಿದಂತೆ ಪೊಲೀಸ್ ಇಲಾಖೆಯ ಜೊತೆಯಲ್ಲಿ ಆಂತರಿಕ ಭದ್ರತಾ ಕಾರ್ಯಗಳನ್ನು ಗೃಹ ರಕ್ಷಕ ದಳದವರು ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶ್ಲಾಘಿಸಿದರು. ಅವರು ಬುಧವಾರ ನಗರದ ಅಜ್ಜರಕಾಡು ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಗೃಹರಕ್ಷಕ ದಳ ಉಡುಪಿ ಜಿಲ್ಲೆ ಇವರ ವತಿಯಿಂದ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪೊಲೀಸ್ ಸಿಬ್ಬಂದಿಗಳ ಕೊರತೆ ಅಥವಾ ಸಂಕಷ್ಟ ಸಂದರ್ಭದಲ್ಲಿ ಜಿಲ್ಲಾಡಳಿತದ ಜೊತೆ ಗೃಹ ರಕ್ಷಕ ದಳದವರು ಕೈಜೋಡಿಸಿ, ಸಮಾಜಕ್ಕೆ ಉತ್ತಮ ಸೇವೆಯನ್ನು ಗೃಹ ರಕ್ಷಕ ದಳದವರು ನೀಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗೃಹರಕ್ಷಕ ದಳದವರು ತಮ್ಮ ಕರ್ತವ್ಯವನ್ನು ನಿರ್ವಹಿಸುವುದರ ಜೊತೆಗೆ ತಮ್ಮ ಕುಟುಂಬ ವರ್ಗದವರ ಜೊತೆ ಉತ್ತಮ ಬಾಂಧವ್ಯ ಹೊಂದಿ, ತಮ್ಮ ಮಕ್ಕಳ ವಿಧ್ಯಾಭ್ಯಾಸಕ್ಕೆ ಉತ್ತೇಜನ ನೀಡುವುದರ ಜೊತೆಗೆ ತಾವುಗಳು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆ, ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲೆಯ ಪ್ರವಾಸೋದ್ಯಮ ತಾಣಗಳಲ್ಲಿ ಗೃಹ ರಕ್ಷಕ ದಳದವರು ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಬೀಚ್‌ಗಳಲ್ಲಿಯೂ ಸಹ ಜೀವ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು, ಮುಂದಿನ ದಿನಗಳಲ್ಲಿ ಜಿಲ್ಲೆಯ ಕಡಲತೀರಗಳಲ್ಲಿ ಜೀವ ರಕ್ಷಕರಾಗಿ ಗೃಹ ರಕ್ಷಕದಳದವರನ್ನು ನಿಯೋಜಿಸಲಾಗುವುದು. ಇದಕ್ಕೆ ಈಜು ತರಬೇತಿಯನ್ನೂ ಸಹ ನೀಡಲಾಗುವುದು ಎಂದರು. ಜಿಲ್ಲಾ ಸಮಾದೇಷ್ಟ ಡಾ. ರೋಶನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡಾಕೂಟದಲ್ಲಿ ನಾಲ್ಕು ಜಿಲ್ಲೆಯ ಗೃಹರಕ್ಷಕ ದಳದವರು ಉತ್ತಮ ಕ್ರೀಡೆಯನ್ನು ಪ್ರದರ್ಶಿಸಿದ್ದಾರೆ. ವಲಯ ಮಟ್ಟದಲ್ಲಿ ಆಯ್ಕೆಯಾದ ಕ್ರೀಡಾಪಟುಗಳು ರಾಜ್ಯಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಉತ್ತಮ ಸ್ಪರ್ಧೆ ನೀಡಬೇಕು ಎಂದು ಕರೆ ನೀಡಿದರು. ಅಲ್ಪ ಸಮಯದಲ್ಲಿಯೇ ಉತ್ತಮವಾಗಿ ಪಶ್ಚಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟಗಳನ್ನು ಆಯೋಜಿಸಲು ಸಹಕರಿಸಿದ ವಿವಿಧ ಸಂಘ-ಸಂಸ್ಥೆಗಳು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ತಿಳಿಸಿದರು.

ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗೃಹರಕ್ಷಕ ಕ್ರೀಡಾಪಟುಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಅಧೀಕ್ಷಕ ರತ್ನಾಕರ ಎಂ ವಿಜೇತರ ಹೆಸರುಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಸಮಾದೇಷ್ಟ ಮುರಲೀ ಮೋಹನ್ ಚೂಂತಾರ್, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾ ಸಮಾದೇಷ್ಟೆ ಸನೀಮ್ ತಾಜ್, ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಸಮಾದೇಷ್ಟ ಡಾ. ಸಂಜು ಟಿ ನಾಯಕ್, ಪುರುಷ ಹಾಗೂ ಮಹಿಳಾ ಗೃಹರಕ್ಷಕರು, ಗೃಹ ರಕ್ಷಕ ಕಚೇರಿ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಸೆಕೆಂಡ್ ಇನ್ ಕಮಾಂಡ್ ರಾಜೇಶ್ ಕೆ.ಸಿ ಸ್ವಾಗತಿಸಿ, ಘಟಕಾಧಿಕಾರಿ ಸ್ಟೀವನ್ ಪ್ರಕಾಶ್ ನಿರೂಪಿಸಿ, ಸಹಾಯಕ ಬೋಧಕ ಕರಿಬಸಪ್ಪ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಡಾ. ನವೀನ್ ಸಾಲಿನ್ಸ್ ಅವರಿಗೆ ಲ್ಯಾಂಕಾಸ್ಟರ್ ವಿವಿಯ ಗೌರವ

ಮಣಿಪಾಲ, ಡಿ.18: ಯುಕೆಯ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯದಿಂದ ಡಿಸೆಂಬರ್ ನಲ್ಲಿ ನಡೆದ ಪದವಿ...

ಜನವರಿ 10 ರಿಂದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ವಾಹನ ಬಳಕೆಗೆ ಅನುವು ಮಾಡಿಕೊಡಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಉಡುಪಿ, ಡಿ.18: ರಾಷ್ಟೀಯ ಹೆದ್ದಾರಿಯ ಇಂದ್ರಾಳಿ ಬಳಿಯ ರೈಲ್ವೇ ಮೇಲ್ಸೇತುವೆ ಕಾಮಗಾರಿಯನ್ನು...

ಶ್ರೀ ನಂದಿಕೇಶ್ವರ ಗೆಳೆಯರ ಬಳಗ: 13ನೇ ವರ್ಷದ ಯಕ್ಷಸಂಭ್ರಮ

ಕೋಟ, ಡಿ.18: ಸಂಘಟನೆಗಳು ಸದೃಢವಾಗಿ ಸಂಘಟಿತ ಶಕ್ತಿಯಾಗಿ ಕಾರ್ಯನಿರ್ವಹಿಸಿದರೆ ಗ್ರಾಮಗಳು ಸುಭಿಕ್ಷೆಯಾಗುವುದರಲ್ಲಿ...

ಬಾಂಧವ್ಯ ಫೌಂಡೇಶನ್: ಮನೆ ಹಸ್ತಾಂತರ

ಕೋಟ, ಡಿ.18: ಬಾಂಧವ್ಯ ಫೌಂಡೇಶನ್ ಕರ್ನಾಟಕ ಇವರ ನೆರಳು ಯೋಜನೆಯಿಂದ ೧೨ನೇ...
error: Content is protected !!