ಮಲ್ಪೆ: ಸಂಶೋಧನೆ ಅಧ್ಯಾಪನದ ಅವಿಭಾಜ್ಯ ಅಂಗ. ಶಿಕ್ಷಕನು ನಿರಂತರವಾಗಿ ಸಂಶೋಧಕನೂ ಆಗಿರಬೇಕು. ಆಗ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೂ ಪ್ರಯೋಜನೆವಾಗುತ್ತದೆ ಎಂದು ವಿದ್ವಾಂಸ ಮತ್ತು ನಿವೃತ್ತ ಪ್ರಾಂಶುಪಾಲ ಪ್ರೊ. ಗಣಪತಿ ಭಟ್ ಕುಳವರ್ಮ ಹೇಳಿದರು.
ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಪಿಎಚ್.ಡಿ. ಪಡೆದ ಅಧ್ಯಾಪಕರನ್ನು ಸನ್ಮಾನಿಸಿ ಮಾತನಾಡುತ್ತಿದ್ದರು. ಒಂದು ಶೈಕ್ಷಣಿಕ ವರ್ಷದಲ್ಲಿ ಆರು ಅಧ್ಯಾಪಕರು ಪಿಎಚ್.ಡಿ. ಪಡೆದಿರುವುದು ಅಪೂರ್ವ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲ ಡಾ. ಗಣನಾಥ ಶೆಟ್ಟಿ ಎಕ್ಕಾರು ಕಾಲೇಜಿನ ವಿದ್ಯಾರ್ಥಿಗಳಲ್ಲಿ ಸಂಶೋಧನಾ ಆಸಕ್ತಿಯನ್ನು ಹೆಚ್ಚಿಸಲು ಕೈಗೊಂಡ ಕ್ರಮಗಳನ್ನು ವಿವರಿಸಿದರು.
ಪಿಎಚ್.ಡಿ ಪಡೆದ ವಾಣಿಜ್ಯ ವಿಭಾಗದ ಡಾ. ಉದಯ ಶೆಟ್ಟಿ ಕೆ. ಹಾಗೂ ಡಾ. ಮೇವಿ ಮಿರಾಂದ, ಸಮಾಜಶಾಸ್ತ್ರ ವಿಭಾಗ ಡಾ. ರಾಘವ ನಾಯ್ಕ, ಗಣಿತಶಾಸ್ತ್ರ ವಿಭಾಗದ ಡಾ. ಸುಜಾತ ವಿ. ಶೇಟ್, ಇಂಗ್ಲೀಷ್ ವಿಭಾಗದ ಡಾ. ಪ್ರಸಾದ್ ರಾವ್ ಹಾಗೂ ಡಾ. ಗೀತಾ ಎನ್., ಸಮಾಜಕಾರ್ಯ ವಿಭಾಗದ ಡಾ. ಪ್ರಮೀಳಾ ಜೆ. ವಾಜ್ ಇವರನ್ನು ಸನ್ಮಾನಿಸಲಾಯಿತು.
ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಶರ್ಮಿಳಾ ಹಾರಾಡಿ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಡಾ. ರಾಮಚಂದ್ರ ಪಾಟ್ಕರ್ ಸನ್ಮಾನಿತರನ್ನು ಪರಿಚಯಿಸಿದರು. ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಡಾ. ದುಗ್ಗಪ್ಪ ಕಜೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕರಾಟೆಯಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಸಾತ್ವಿಕ್ ಡಿ. ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಕಾಲೇಜು ಅಭಿವೃದ್ಧಿ ಸಮಿತಿಯ ಕೋಶಾಧಿಕಾರಿ ದಯಾನಂದ ಶೆಟ್ಟಿ ಕೊಜಕುಳಿ, ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕೀರ್ತನಾ ವಂದಿಸಿದರು.