ಕೋಟ, ಡಿ.14: ವಾರ್ಷಿಕೋತ್ಸವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಳಿಸಲು ವೇದಿಕೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಬನಾ ಅಜ್ಮುಂ ಹೇಳಿದರು. ಶುಕ್ರವಾರ ಗೀತಾನಂದ ವೇದಿಕೆಯಲ್ಲಿ ಕೋಟ ಮಣೂರು ಪಡುಕರೆ ಸರಕಾರಿ ಪದವಿ ಮತ್ತು ಸಂಯುಕ್ತ ಪ್ರೌಢಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಶಾಲಾ ಹಬ್ಬ ಕಡಲು ಜ್ಞಾನದಲೆಗಳ ಭಾವಯಾನ ಇಲ್ಲಿ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು. ಆನಂದ್ ಸಿ ಕುಂದರ್ ಪಡುಕರೆಯನ್ನು ಶೈಕ್ಷಣಿಕ ಕಾಶಿಯನ್ನಾಗಿಸಿದ್ದಾರೆ. ಒಂದು ಸರಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಸರಿಸಮನಾಗಿ ರೂಪುಗೊಳಿಸಿದ್ದಾರೆ. ಸರಕಾರದ ಸವಲತ್ತುಗಳಿಗೆ ಕಾಯದೆ ತನ್ನ ಸ್ವಂತ ಹಣವನ್ನು ಶಾಲಾ ಮೂಲಭೂತ ಸೌಕರ್ಯಗಳಿಗೆ ಒದಗಿಸಿದ್ದಾರೆ. ಮಕ್ಕಳ ಪಠ್ಯ, ಸಹಪಠ್ಯದ ಜತೆಗೆ ಜೀವನ ರೂಪಿಸಿಕೊಳ್ಳಲು ಗ್ರಾಮೀಣ ಭಾಗದ ಸರಕಾರಿ ಶಾಲೆಗಳ ಮಕ್ಕಳ ಸಾಧನೆ ಶ್ರೇಷ್ಠವಾದದ್ದು. ಪೋಷಕರು ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಹೊರಬರಬೇಕು. ಯಾವ ಭಾಷೆಯು ವಿದ್ಯಾರ್ಥಿಗೆ ಅಂತಿಮವಲ್ಲ ಕಲಿಕೆಯಲ್ಲಿ ಮನಸ್ಸು ನೀಡಿದರೆ ಸಾಧನೆಯ ಶಿಖರವೇರಲು ಸಾಧ್ಯವಿದೆ. ಗುರಿ ಇಟ್ಟು ಬದುಕುವ ಮನಸ್ಥಿತಿ ಸೃಷ್ಠಿಸಿಕೊಳ್ಳಿ ಎಂದರು. ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಉದ್ಘಾಟಿಸಿ ಶಾಲಾ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಗೀತಾನಂದ ಫೌಂಡೇಶನ್ ವತಿಯಿಂದ ನೀಡಲಾಯಿತು. ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಗಣಪತಿ ಮುಖ್ಯ ಅಭ್ಯಾಗತರಾಗಿ ಪಾಲ್ಗೊಂಡು ಗ್ರಾಮೀಣ ಕರಾವಳಿ ಭಾಗದ ಶಿಕ್ಷಣ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಕೊಂಡಾಡಿದರು. ಅತಿಥಿಗಳಾಗಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ.ಶೆಟ್ಟಿ, ಶಾಲಾ ಎಸ್ ಡಿ ಎಂ ಸಿ ಪ್ರೌಢ ವಿಭಾಗದ ಅಧ್ಯಕ್ಷ ರಾಘವೇಂದ್ರ ಕಾಂಚನ್, ಪ್ರಾಥಮಿಕ ವಿಭಾಗದ ಅಧ್ಯಕ್ಷ ನಾಗರಾಜ್, ವಾಹಿನಿ ಯುವಕ ಮಂಡಲದ ಅಧ್ಯಕ್ಷ ರಮೇಶ್ ಹೆಚ್ ಕುಂದರ್ ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ವಿವೇಕಾನಂದ ವಿ. ಗಾಂವ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡೆನಿಸ್ ಬಾಂಝಿ ಸ್ವಾಗತಿಸಿ, ಶಿಕ್ಷಕಿ ರಜನಿ ನಿರೂಪಿಸಿದರು. ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ಮಂಜುನಾಥ್ ಹೊಳ್ಳ ವಂದಿಸಿದರು. ಕಾರ್ಯಕ್ರಮದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.