ಉಡುಪಿ, ಡಿ.4: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ, ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ನ್ಯಾಯವಾದಿಗಳ ಸಂಘ, ಲಯನ್ಸ್ ಕ್ಲಬ್ ಕಾರ್ಕಳ, ಶಿರ್ಡಿ ಸಾಯಿ ಪ್ರಥಮ ದರ್ಜೆ ಕಾಲೇಜು, ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಚೇರಿ ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ತಾಲೂಕು ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಮಾಹಿತಿ ಕಾರ್ಯಕ್ರಮವು ಮಂಗಳವಾರ ಕಾರ್ಕಳದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಿತು. ಪ್ರಧಾನ ಸಿವಿಲ್ ಮತ್ತು ಜಿ.ಎಂ.ಎಸ್.ಸಿ ನ್ಯಾಯಾಧೀಶೆ ಕೋಮಲ ಆರ್.ಸಿ ಕಾರ್ಯಕ್ರಮ ಉದ್ಘಾಟಿಸಿ, ಏಡ್ಸ್ ಅಥವಾ ಇನ್ಯಾವುದೇ ಕಾಯಿಲೆ ಬರದಂತೆ ಎಚ್ಚರ ವಹಿಸುವುದು ಅವಶ್ಯಕ ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಕಾರ್ಕಳ ಅಧ್ಯಕ್ಷ ನಿತ್ಯಾನಂದ ಭಂಡಾರಿ ಮಾತನಾಡಿ, ಏಡ್ಸ್ ಕುರಿತಾದ ಮಾಹಿತಿಯನ್ನು ಸಮುದಾಯದಲ್ಲಿ ಜಾಗೃತಿ ಮೂಡಿಸಿ ಯುವ ಜನಾಂಗ ಈ ಮಾಹಿತಿ ಕಾರ್ಯಗಾರದ ಸದುಪಯೋಗ ಪಡೆಯಬೇಕು ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಸಂದೀಪ್ ಕುಡ್ವ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯಲ್ಲಿ ಏಡ್ಸ್ ನಿಯಂತ್ರಣ ಕಾರ್ಯಕ್ರಮದ ಕಿರು ಚಿತ್ರಣ ನೀಡಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಫುಡ್ ಕಿಟ್ ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯ ಆಪ್ತ ಸಮಾಲೋಚಕಿ ಬಿಂದಿಯಾ ಶೆಟ್ಟಿ, ಏಡ್ಸ್ ಕುರಿತಾಗಿ ಸಮಗ್ರ ಮಾಹಿತಿಅಂಕಿ ಅಂಶಗಳೊಂದಿಗೆ ಪ್ರಸ್ತುತಪಡಿಸಿದರು. ಮುಖ್ಯ ಅತಿಥಿಗಳಾದ ಕಾರ್ಕಳ ನ್ಯಾಯವಾದಿಗಳ ಸಂಘದ ಕೋಶಾಧಿಕಾರಿ ಹೆಚ್.ಅನಿಲ್ ಕುಮಾರ್ ಶೆಟ್ಟಿ, ಶಿರ್ಡಿ ಸಾಯಿ ಪ್ರಥಮ ದರ್ಜೆ ಕಾಲೇಜು ಸಂಚಾಲಕ ಆಶಿಶ್ ಶೆಟ್ಟಿ, ಉಪನ್ಯಾಸಕ ಉಮೇಶ್, ಕ್ರಿಯೇಟಿವ್ ಪದವಿ ಪೂರ್ವ ಕಾಲೇಜು ಉಪನ್ಯಾಸಕ ವೃಂದದವರು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಸಂತ್ ಶೆಟ್ಟಿ ಸ್ವಾಗತಿಸಿ, ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ನಿರೂಪಿಸಿ, ವಂದಿಸಿದರು.