ಉಡುಪಿ, ನ.19: ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಿಮಿತ್ತ ನಡೆಯುವ ಕಾರ್ಯಕ್ರಮದ ಪ್ರಯುಕ್ತ ನವೆಂಬರ್ 19 ರಿಂದ 21 ರ ವರೆಗೆ ಮೂರು ಮಾರ್ಗದಿಂದ ಸ್ಟೇಟ್ ಬ್ಯಾಂಕ್ ಜಂಕ್ಷನ್‌ವರೆಗೆ ಈ ಕೆಳಗಿನಂತೆ ತಾತ್ಕಾಲಿಕ ಪರ್ಯಾಯ ಸಂಚಾರ ವ್ಯವಸ್ಥೆ ಕಲ್ಪಿಸಿ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿರುತ್ತಾರೆ. ನ. 19 ರಂದು ಬಂಡಿಯಲ್ಲಿ ಗರುಡ ವಾಹನ ಉತ್ಸವ, ಕೆರೆದೀಪ ಪ್ರಯುಕ್ತ ಅಂದು ರಾತ್ರಿ 8 ಗಂಟೆಯಿಂದ 12 ರ ವರೆಗೆ ಘನವಾಹನಗಳು ಬಂಗ್ಲೆಗುಡ್ಡೆಯಿಂದ ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು. ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್‌ಗಳು ತಾಲೂಕು ಜಂಕ್ಷನ್‌ನಿಂದ ಕಲ್ಲೊಟ್ಟೆ, ಮಾರ್ಕೇಟ್ ಮಾರ್ಗವಾಗಿ ಬಸ್‌ನಿಲ್ದಾಣ ಪ್ರವೇಶಿಸಬೇಕು ಹಾಗೂ ಸ್ಟೇಟ್ ಬ್ಯಾಂಕ್ ಜಂಕ್ಷನ್‌ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್‌ವರೆಗಿನ ಮಾರ್ಗದಲ್ಲಿ ದ್ವಿ-ಚಕ್ರ ಹಾಗೂ ಲಘು ವಾಹನಗಳು ಸಂಚರಿಸಬೇಕು.
ನ. 20 ರಂದು ಲಕ್ಷದೀಪೋತ್ಸವ ವನಭೋಜನ ಉತ್ಸವ ಇರುವುದರಿಂದ ಅಂದು ಬೆಳಗ್ಗೆ 10 ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಹಾಗೂ ನ. 21 ರಂದು ಓಕುಳಿ ಹಾಗೂ ಪಲ್ಲಕ್ಕಿ ಉತ್ಸವ ಇರುವುದರಿಂದ ಅಂದು ಸಂಜೆ 4 ಗಂಟೆಯಿಂದ ಮರುದಿನ ಬೆಳಗ್ಗೆ 4 ಗಂಟೆಯವರೆಗೆ ಘನವಾಹನಗಳು ಬಂಗ್ಲೆಗುಡ್ಡೆಯಿಂದ ಹಿರಿಯಂಗಡಿ, ಪುಲ್ಕೇರಿ ಮಾರ್ಗವಾಗಿ ಸಂಚರಿಸಬೇಕು. ಬಸ್‌ಗಳು ಕಾರ್ಕಳದಿಂದ ಜೋಡುರಸ್ತೆ ಕಡೆಗೆ ಹಾಗೂ ಜೋಡುರಸ್ತೆಯಿಂದ ಕಾರ್ಕಳ ಕಡೆಗೆ ಸಂಚರಿಸುವ ಬಸ್‌ಗಳು ತಾಲೂಕು ಜಂಕ್ಷನ್‌ನಿಂದ ಕಲ್ಲೊಟ್ಟೆ ಮಾರ್ಕೇಟ್ ಮಾರ್ಗವಾಗಿ ಬಸ್ ನಿಲ್ದಾಣ ಪ್ರವೇಶಿಸಬೇಕು. ಸ್ಟೇಟ್ ಬ್ಯಾಂಕ್ ಜಂಕ್ಷನ್‌ನಿಂದ ಗಾಂಧಿ ಮೈದಾನವಾಗಿ ಕಾಮಧೇನು ಹೋಟೆಲ್ ಜಂಕ್ಷನ್‌ವರೆಗಿನ ಮಾರ್ಗದಲ್ಲಿ ದ್ವಿಚಕ್ರ ಹಾಗೂ ಲಘು ವಾಹನಗಳು ಸಂಚರಿಸಬೇಕು. ಮೇಲ್ಕಂಡ ಅಧಿಸೂಚನೆಯನ್ನು ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನ ನಿಯಮ 1989 ರ ನಿಯಮ 221 5(ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.