ಉಡುಪಿ, ನ.19: ಸಂಪುಟ ನರಸಿಂಹಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠ-ಕುಕ್ಕೆಸುಬ್ರಹ್ಮಣ್ಯ ಮಠದ ಡಾ. ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಗಳ ಮುಂದಾಳತ್ವದಲ್ಲಿ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ, ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಮತ್ತು ಉಡುಪಿಗೆ ಬನ್ನಿ-ಉಡುಪಿ ಇವರ ಜಂಟಿ ಸಹಯೋಗದಲ್ಲಿ ಪ್ರಾರಂಭಿಸಿದ ಪ್ರಾಚ್ಯ ತೌಳವ ಕರ್ಣಾಟ ತಂಡದಿಂದ ಹೆಬ್ರಿ ತಾಲೂಕಿನ ಚಾರ ಬಸದಿ ಪರಿಸರದ ಸ್ವಚ್ಛತಾ ಕಾರ್ಯಕ್ರಮವು, ಮೂಡುಬಿದಿರೆ ಜೈನಕಾಶಿ ಮಠಾಧಿಪತಿ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯ ಮಹಾಸ್ವಾಮೀಜಿಗಳ ಉಪಸ್ಥಿತಿ ಮತ್ತು ಮಾರ್ಗದರ್ಶನದಡಿಯಲ್ಲಿ ನವೆಂಬರ್ 17ರಂದು ಜರುಗಿತು.
ಕಾರ್ಯಕ್ರಮದ ಆಯೋಜಕರಾದ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆಸುಬ್ರಹ್ಮಣ್ಯ, ಇಲ್ಲಿನ ನಿರ್ದೇಶಕರಾದ ಡಾ.ಜಿ. ವಿ ಕಲ್ಲಾಪುರ ಮತ್ತು ಉಪನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು.
ಅಧ್ಯಕ್ಷೀಯ ನುಡಿಗಳನ್ನು ನುಡಿದ ಸ್ವಾಮೀಜಿಗಳು ಸರ್ವಧರ್ಮ ಸಮನ್ವಯತೆಯ ಜೊತೆಗೆ ಇತಿಹಾಸವನ್ನು ಉಳಿಸಿ, ರಕ್ಷಿಸುವಲ್ಲಿ ಇಂದಿನ ಯುವ ಸಮುದಾಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ಈ ರೀತಿಯ ಸತ್ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ತಿಳಿಸಿದರು.
ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಜಾನಪದ ಕ್ಷೇತ್ರದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಹಾಗೂ ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಘಟಕದ ಕಾರ್ಯಕರ್ತರಾದ ಡಾ. ಗಣನಾಥ ಎಕ್ಕಾರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು-ಹೆಬ್ರಿ, ಇಲ್ಲಿನ ಪ್ರಾಚಾರ್ಯರು ಡಾ. ವಿದ್ಯಾಧರ ಹೆಗ್ಡೆ ಮತ್ತು ಎನ್.ಎಸ್.ಎಸ್ ಅಧಿಕಾರಿ ಬಾಲರಾಜ್ ಡಿ.ಬಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ, ರೋವರ್ ರೆಂಜರ್ಸ್ ಘಟಕ ಮತ್ತು ಯುವ ರೆಡ್‌ಕ್ರಾಸ್ ಘಟಕದ ವಿದ್ಯಾರ್ಥಿಗಳು, ಸುರಾಲ್ ಅರಮನೆಯ ಸಂತೋಷ್, ಪುರಾತತ್ತ್ವ ಉತ್ಖನನ ವಿಭಾಗದ ಡಾ. ಎಸ್.ಜಿ. ಸಾಮಕ್, ಸ್ಥಳೀಯರು, ಹಾಗೂ ರಾಜೇಶ್ವರ ಕಂಚಾರ್ತಿ ಉಪಾಧ್ಯಾಯ ಮತ್ತು ಇತಿಹಾಸ ಆಸಕ್ತ ವಿದ್ಯಾರ್ಥಿಗಳು ಸಹಕಾರ ನೀಡಿದರು.
ಕಾರ್ಯಕ್ರಮದಲ್ಲಿ ಸುಮಾರು ವರ್ಷಗಳಿಂದ ಚಾರ ಬಸದಿ ಪರಿಸರವನ್ನು ತನ್ನ ಸ್ವ ಇಚ್ಛೆಯಿಂದ ಸ್ವಚ್ಛ ಮಾಡಿಕೊಂಡು ಬಂದಿರುವ ವಿಜಯ ಬ್ಯಾಂಕ್-ಆರ್ಡಿಯಲ್ಲಿ ಉದ್ಯೋಗಿಯಾಗಿ ನಿವೃತ್ತಗೊಂಡಿರುವ ವಸಂತ ಶೆಟ್ಟಿ ಅವರಿಗೆ ಪುರಸ್ಕಾರ ನೀಡಲಾಯಿತು. ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ, ಉಡುಪಿಗೆ ಬನ್ನಿ ಇದರ ಡಾ. ಗಣೇಶ್‌ಪ್ರಸಾದ್ ಜಿ. ನಾಯಕ್, ವಾದಿರಾಜ ಶೆಟ್ಟಿ, ತುಳುನಾಡು ವಾರ್ತೆ ಮತ್ತು ಸಾಮಾಜಿಕ ಜಾಲತಾಣ ಇದರ ಸ್ಥಾಪಕ ನಿರ್ದೇಶಕರಾದ ಪುನೀತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.