Saturday, January 18, 2025
Saturday, January 18, 2025

ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ; ಜನರಲ್ಲಿ ಆತಂಕ ಬೇಡ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಡಾ. ಕೆ. ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ; ಜನರಲ್ಲಿ ಆತಂಕ ಬೇಡ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ನ.16: ಡಾ. ಕೆ. ಕಸ್ತೂರಿ ರಂಗನ್ ನೇತೃತ್ವದ ಉನ್ನತ ಮಟ್ಟದ ಕಾರ್ಯತಂಡದ ಆಧಾರದ ಮೇಲೆ ಪಶ್ಚಿಮ ಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿರುವ ಕರಡು ಅಧಿಸೂಚನೆ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಸದ್ಯದ ಪರಿಸ್ಥಿತಿಯಲ್ಲಿ ಜನರಲ್ಲಿ ಆತಂಕ ಬೇಡ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಪರಸರ ಸೂಕ್ಷ್ಮ ಪ್ರದೇಶ ಮತ್ತು ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರದ ಅರಣ್ಯ ಕಾಯಿದೆಗಳು ಅರಣ್ಯ ಇಲಾಖೆಯ ನೀತಿ ನಿಯಮಗಳಿಂದ ನಿರಂತರ ತೊಂದರೆಗೊಳಗಾಗುತ್ತಿರುವ ಕಾಡಂಚಿನ ಭಾಗದ ನಿವಾಸಿಗಳಿಗೆ ಇನ್ನೂ ಕಸ್ತೂರಿ ರಂಗನ್ ವರದಿ ಜಾರಿಯಾದರೆ ವಿದ್ಯುತ್, ರಸ್ತೆ, ಸೇತುವೆ, ಕುಡಿಯುವ ನೀರು, ಜನವಸತಿ ಪ್ರದೇಶ, ವಸತಿ ಪ್ರದೇಶ, ಮನೆಗಳ ನಿರ್ಮಾಣ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳಿಗೆ ಕುತ್ತು ಬಂದು ಭವಿಷ್ಯದಲ್ಲಿ ಜನರ ಜೀವನೋಪಾಯಕ್ಕೆ ಅನಾನುಕೂಲ ಉಂಟಾಗಬಹುದೆಂಬ ಆತಂಕ ಮಡುಗಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸುವ ಬಗ್ಗೆ ಡಾ. ಕೆ. ಕಸ್ತೂರಿ ರಂಗನ್ ವರದಿ ಆಧಾರಿಸಿದ ಕರಡು ಅಧಿಸೂಚನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದೆ ಎಂದರು.

ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನು ಆಧಾರಿಸಿ, ಸೂಕ್ಷ್ಮ ಪ್ರದೇಶವೆಂದು ಘೋಷಿಸಲು ಈಗಾಗಲೇ 6 ಬಾರಿ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ಈವರೆಗೂ ಅದು ಜಾರಿಗೆ ಬಂದಿರುವುದಿಲ್ಲ. ಮುಂದಿನ ದಿನಗಳಲ್ಲಿ ಜಾರಿ ಮಾಡಲು ಮುಂದಾಗಬಹುದು. ಇದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತದೆ. ಸ್ಥಳೀಯವಾಗಿ ವಾಸಿಸುವ ಜನರ ಆಕ್ಷೇಪಣೆಗಳು, ಅವರಿಗೆ ಆಗುವ ಅನಾನುಕೂಲಗಳನ್ನು ಮೇಲ್ಮಟ್ಟದಲ್ಲಿ ತಿಳಿಸುವ ಕಾರ್ಯವನ್ನು ಅಧಿಕಾರಿಗಳು ಮಾಡಬೇಕು ಎಂದರು.

ಪ್ರಸ್ತುತ ಜಾರಿಯಲ್ಲಿರುವ ಇಕೋ ಸೆನ್ಸಿಟೀವ್ ಝೋನ್ ನಿಂದ ಕಾಡಂಚಿನ ಸುರಕ್ಷಿತ ಅರಣ್ಯ ಪ್ರದೇಶ ಹಾಗೂ ವನ್ಯಜೀವಿ ಅಭಯಾರಣ್ಯ ಪ್ರದೇಶ ವ್ಯಾಪ್ತಿಯಿಂದ ಒಂದು ಕಿ.ಮೀ ವ್ಯಾಪ್ತಿಯ ಬಫರ್ ಝೋನ್‌ಗಳಲ್ಲಿ ಜನರು ಯಾವುದೇ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಳ್ಳಲು ಇಕೋ ಸೆನ್ಸಿಟೀವ್ ಝೋನ್‌ನ ಮಾನಿಟರಿಂಗ್ ಕಮಿಟಿಯ ಪೂರ್ವಾನುಮತಿ ಪಡೆಯುವುದು ಅವಶ್ಯಕತೆ ಇದ್ದು, ಇದರಿಂದ ಜನರ ದೈನಂದಿನ ಜೀವನಗಳ ಆಗು-ಹೋಗುಗಳಿಗೆ ತೊಂದರೆ ಉಂಟಾಗುತ್ತಿದೆ. ಇದನ್ನು ಸ್ಥಳೀಯವಾಗಿ ಅನುಮತಿ ನೀಡುವ ಕೆಲವೊಂದು ತಿದ್ದುಪಡಿಗಳು ಆಗಬೇಕಿದೆ ಎಂದರು. ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಸರಕಾರಗಳು ಜಾರಿಗೆ ತರುವ ನೀತಿ ನಿಯಮಗಳು ಹಾಗೂ ಕಾನೂನುಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಅಧಿಕಾರಿಗಳ ಮೇಲೆ ಇರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದೆ ಎಂದ ಅವರು, ಪ್ರಸ್ತುತ ಜಾರಿಯಲ್ಲಿರುವ ಇಕೋ ಸೆನ್ಸಿಟಿವ್ ಝೋನ್‌ನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಮಾನಿಟರಿಂಗ್ ಕಮಿಟಿಯ ಪೂರ್ವಾನುಮತಿ ಪಡೆಯುವುದು ಅವಶ್ಯವಿರುತ್ತದೆ. ಪರಿಸರಕ್ಕೆ ಹಾನಿಯಾಗದೇ ಇರುವ ಬಗ್ಗೆ ಪರಿಶೀಲಿಸಿ, ಅನುಮತಿಯನ್ನು ನೀಡುತ್ತಿದೆ ಎಂದರು.

ಶಾಸಕ ಎ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸರಕಾರಗಳು ಜಾರಿಗೆ ತರುವ ಕಾನೂನುಗಳಿಂದ ಜನಸಾಮಾನ್ಯರ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಜನರ ಇವುಗಳನ್ನು ಜಾರಿಗೆ ತರುವ ಮುನ್ನ ಜನರ ಆಕ್ಷೇಪಣೆಗಳ ಬಗ್ಗೆಯೂ ಆಲಿಸಿ, ಸಾಧಕ- ಬಾಧಕಗಳನ್ನು ಪರಾಮರ್ಶಿಸಿ, ಜಾರಿಗೆ ತರಬೇಕು ಎಂದ ಅವರು, ಇಕೋ-ಸೆನ್ಸಿಟಿವ್ ಝೋನ್‌ನ ವ್ಯಾಪ್ತಿಯ ಒಂದು ಕಿ.ಮೀ ಬಫರ್ ಝೋನ್ ಪ್ರದೇಶವು ಯಾವ-ಯಾವ ಗ್ರಾಮಗಳಲ್ಲಿ, ಯಾವ ಯಾವ ಸರ್ವೇ ನಂಬರ್ ಒಳಗೊಂಡಿವೆ ಎಂಬುದರ ಬಗ್ಗೆ ನಿಖರ ಮಾಹಿತಿಯನ್ನು ಜನರಿಗೆ ತಿಳಿಸಬೇಕು. ಆದರೆ ಪ್ರಸ್ತುತ ಈ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ. ಕಂದಾಯ ಹಾಗೂ ಅರಣ್ಯ ಇಲಾಖೆಯು ಜಂಟಿ ಸರ್ವೆಯನ್ನು ಮಾಡಿ, ಇದರ ಗಡಿಯನ್ನು ಗುರುತಿಸಬೇಕಿದೆ ಎಂದರು. ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಮಾತನಾಡಿ, ಯಾವುದೇ ವರದಿಯನ್ನು ಜಾರಿಗೆ ತರುವ ಮುನ್ನ ಜನರಿಗೆ ಆಗುವ ತೊಂದರೆಗಳು, ಅನುಕೂಲಗಳು ಹಾಗೂ ಸಿಗುವ ಸೌಲಭ್ಯಗಳ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಬೇಕು. ಕಸ್ತೂರಿ ರಂಗನ್ ವರದಿಯ ಜಾರಿಗೆ ಮುಂದಾಗಿರುವುದು ಕಾಡಂಚಿನ ಜನರಿಗೆ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಅಥವಾ ವರದಿ ಜಾರಿ ಮಾಡಲು ಸೂಚಿಸಿರುವ ಸರ್ವೋಚ್ಚ ನ್ಯಾಯಾಲಯದ ಗಮನಕ್ಕೆ ತರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿರುತ್ತದೆ. ಈ ಕಾರ್ಯವನ್ನು ತಪ್ಪದೇ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಕಾರ್ಕಳ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್ ಬಾಬು ಎಂ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರ್‌ಗಳು, ತಾಲೂಕು ಪಂಚಾಯತ್ ಇ.ಓ ಗಳು, ಅಧಿಸೂಚಿತ ಗ್ರಾಮ ಪ್ರದೇಶಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!