Thursday, November 14, 2024
Thursday, November 14, 2024

ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಕಾರ್ಮಿಕರಿಗೆ ಲಭ್ಯವಿರುವ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ನ.12: ಕಾರ್ಮಿಕರ ಕಲ್ಯಾಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಕಾನೂನುಗಳನ್ನು ಜಾರಿಗೆ ತರುವುದರ ಜೊತೆಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದು, ಇವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಮಂಗಳವಾರ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆ ಹಾಗೂ ಕಾರ್ಮಿಕರ ಭವಿಷ್ಯ ಶಿಧಿ ಸಂಘಟನೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲೆಯ ಉದ್ಯೋಗದಾತರಿಗೆ, ಗುತ್ತಿಗೆದಾರರಿಗೆ, ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ, ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತ ಜಿಲ್ಲಾ ಮಟ್ಟದ ಕಾರ್ಯಾಗಾರವುವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕಾರ್ಮಿಕ ಕಾಯಿದೆಗಳು ಬಲಿಷ್ಠವಾಗಿದ್ದು, ಇವುಗಳ ಬಗ್ಗೆ ಉದ್ಯೋಗದಾತರಿಗೆ ಕಾನೂನಿನ ಅರಿವು ಮೂಡಿಸಿ ಆ ಮೂಲಕ ಕಾರ್ಮಿಕರಿಗೆ ಸಿಗುವಂತಹ ಸೌಲಭ್ಯಗಳನ್ನು ಸರಿಯಾಗಿ ತಲುಪಿಸಿ, ಮಾನವೀಯ ನೆಲೆಯೊಂದಿಗೆ ಕಾನೂನಿನ ಅಡಿಯಲ್ಲಿ ಕಾರ್ಮಿಕರನ್ನು ದುಡಿಸಿಕೊಳ್ಳುವ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಕಾಯಿದೆಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತವೆ ಎಂದರು. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರಿಗೆ ಅವರ ಪರ ಕಾರ್ಮಿಕ ಕಾನೂನುಗಳಿವೆ. ಅವುಗಳನ್ನು ಅರ್ಥೈಸಿಕೊಂಡು ಉದ್ಯೋಗದಾತರು ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು. ಕಾರ್ಮಿಕರ ದುಡಿಮೆಗೆ ಅನುಗುಣವಾಗಿ ಕನಿಷ್ಠ ವೇತನ ಕಾಯಿದೆ ಅನ್ವಯ ಸಂಬಳ, ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಇ.ಎಸ್.ಐ, ಪಿಎಫ್, ಹೆಚ್ಚುವರಿ ಕೆಲಸ ಮಾಡಿಸಿಕೊಂಡಲ್ಲಿ ಹೆಚ್ಚುವರಿ ಪೇಮೆಂಟ್ ನೀಡುವುದು, ಕಾರ್ಮಿಕರು ಸುರಕ್ಷತೆಯಿಂದ ಕೆಲಸ ಮಾಡಲು ಸುರಕ್ಷಿತ ವಾತಾವರಣವನ್ನು ಕಲ್ಪಿಸಬೇಕು ಎಂದರು. ಕಾರ್ಮಿಕ ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಮಿಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನಿಡುವ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಉದ್ಯೋಗದಾತರು, ಗುತ್ತಿಗೆದಾರರು ಹಾಗೂ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಾರ್ಮಿಕರ ಸುರಕ್ಷತೆಗೆ ಅನುಗುಣವಾಗಿ ಕಾನೂನುಗಳನ್ನು ರೂಪಿಸಿವೆ. ಸರಕಾರದಿಂದ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಹಲವು ಸವಲತ್ತುಗಳಿವೆ. ಈ ಬಗ್ಗೆ ಹಲವರಿಗೆ ಅರಿವೇ ಇರುವುದಿಲ್ಲ. ಉದ್ಯೋಗದಾತರು ಹಾಗೂ ಸಂಬಂಧಪಟ್ಟ ಇಲಾಖೆಗಳು ಇವುಗಳನ್ನು ತಲುಪಿಸುವಲ್ಲಿ ಕಾರ್ಯಪ್ರವೃತ್ತರಾಗುವುದರೊಂದಿಗೆ, ಉದ್ಯೋಗದಾತರು ಸ್ವ-ಜವಾಬ್ದಾರಿಗಳನ್ನು ಅರಿತು ಕಾರ್ಮಿಕರನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳಬೇಕು ಎಂದರು ಉಡುಪಿ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಕಮಲ್ ಷಾ ಅಲ್ತಾಪ್ ಅಹಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಮಿಕರ ಕಲ್ಯಾಣವನ್ನು ಆದ್ಯತೆಯನ್ನಾಗಿಸಿಕೊಂಡು ಸರಕಾರ ಹಾಗೂ ಇಲಾಖೆಯು ಕಾರ್ಮಿಕರು ಸಬಲರಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರೋಗ್ಯದ ಹಿತದೃಷ್ಠಿಯಿಂದ ಹಲವು ಸೌಲಭ್ಯಗಳನ್ನು ಒದಗಿಸುವ ಮೂಲಕ ಕಾರ್ಮಿಕರ ಹಿತಕಾಯುವಲ್ಲಿ ಹಾಗೂ ಜನಪರ ಯೋಜನೆಗಳನ್ನು ಸಕಾಲದಲ್ಲಿ ಕಾರ್ಮಿಕರುಗಳಿಗೆ ತಲುಪಿಸಿದೆ ಎಂದರು.

ಜಿಲ್ಲೆಯಲ್ಲಿ ಉದ್ಭವಿಸುವ ಕೈಗಾರಿಕಾ ವಿವಾದಗಳನ್ನು ಸೌಹಾರ್ದಯುತ ನೆಲೆಯಲ್ಲಿ ಬಗೆಹರಿಸಿ, ಕೈಗಾರಿಕಾ ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮೇಲ್ವಿಚಾರಣೆ ನಡೆಸುತ್ತಾ ಬಂದಿದೆ. ಕಾರ್ಮಿಕರ ಹಕ್ಕುಗಳನ್ನು ರಕ್ಷಿಸಿ, ಅವರ ಸ್ಥಿತಿಗತಿಗಳನ್ನು ಉತ್ತೇಜಿಸುವುದರ ಜೊತೆಗೆ ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ಕಲ್ಪಿಸಿದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ. ಆರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಮಿಕರು ಹಾಗೂ ಮಾಲೀಕರ ನಡುವೆ ಉತ್ತಮ ಬಾಂಧವ್ಯ ಇರಬೇಕು. ಕಾರ್ಮಿಕರುಗಳಿಗೆ ಸೂಕ್ತ ಸೌಲಭ್ಯ ಒದಗಿಸಿದಾಗ ಕಾರ್ಮಿಕರು ಹಾಗೂ ಮಾಲೀಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗುವುದಿಲ್ಲ ಎಂದ ಅವರು, ಉದ್ಯೋಗ ನೀಡಿದಾಗ ಕಾರ್ಮಿಕರ ಅಗತ್ಯ ದಾಖಲೆಗಳನ್ನು ಕಾನೂನಿನ ಪ್ರಕಾರ ನಿರ್ವಹಣೆ ಮಾಡುವುದು ಉದ್ಯೋಗದಾತರ ಜವಾಬ್ದಾರಿ ಎಂದರು.

ಸಂಪನ್ಮೂಲ ವ್ಯಕ್ತಿಗಳು ಕಾರ್ಮಿಕ ಇಲಾಖೆಯಿಂದ ಹಾಗೂ ಇತರೆ ಇಲಾಖೆಯಿಂದ ಅನುಷ್ಠಾನಗೊಳಿಸುತ್ತಿರುವ ವಿವಿಧ ಕಾರ್ಮಿಕ ಕಾಯ್ದೆಗಳ ಪರಿಣಾಮಕಾರಿ ಅನುಷ್ಠಾನದ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಜಿಯಾ ಸುಲ್ತಾನ, ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯ ಜಿಲ್ಲಾ ಪ್ರಾದೇಶಿಕ ಆಯುಕ್ತ ಸಂದೀಪ್ ಕುಮಾರ್, ಕಾರ್ಖಾನೆಗಳು, ಬಾಯ್ಲರುಗಳು ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕ ಪ್ರತಾಪ್ ಹೆಚ್ ಎ, ಕಾರ್ಮಿಕರ ರಾಜ್ಯ ವಿಮಾ ಯೋಜನೆ ಮತ್ತು ವೈದ್ಯಕೀಯ ಸೇವೆಯ ಆಡಳಿತ ವಿಮಾ ವೈದ್ಯಾಧಿಕಾರಿ ಡಾ. ಹೇಮಂತ್ ಕುಮಾರ್, ಮಂಗಳೂರು ಉಪ ವಿಭಾಗದ ಕಾರ್ಮಿಕ ಅಧಿಕಾರಿ ಬಿ.ಆರ್ ಕುಮಾರ್, ಕಾರ್ಮಿಕ ನಿರೀಕ್ಷಕರುಗಳು, ಗುತ್ತಿಗೆದಾರರು, ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಬಾಲ ಕಾರ್ಮಿಕ ಯೋಜನಾ ಸಂಸ್ಥೆಯ ಯೋಜನಾ ನಿರ್ದೇಶಕಿ ಅಮೃತಾ ಸ್ವಾಗತಿಸಿ, ಮಂಜುಳಾ ಜಿ ತೆಕ್ಕಟ್ಟೆ ನಿರೂಪಿಸಿ, ಕಾರ್ಕಳ ವೃತ್ತ ಕಾರ್ಮಿಕ ನಿರೀಕ್ಷಕ ನವೀನ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ ಸಂಭ್ರಮ

ಉಡುಪಿ, ನ.13: ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಪರ್ಯಾಯ...

ಮೀನುಗಾರರಿಗೆ ಎನ್.ಎಫ್.ಡಿ.ಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ

ಉಡುಪಿ, ನ.13: ಅಸಂಘಟಿತ ವಲಯವಾದ ಮೀನುಗಾರಿಕೆ ವಲಯವನ್ನು ಸಂಘಟಿತ ವಲಯವಾಗಿ ರೂಪಿಸುವ...

ಆಳ್ವಾಸ್ ವಿರಾಸತ್-2024: ಮಳಿಗೆ ತೆರೆಯಲು ಆಹ್ವಾನ

ಮೂಡುಬಿದಿರೆ, ನ.13: ಇದೇ ಬರುವ ಡಿಸೆಂಬರ್ 10 ಮಂಗಳವಾರದಿಂದ 15ನೇ ಭಾನುವಾರದವರೆಗೆ...

ಜ್ಞಾನಸುಧಾ: ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಸಮಾರೋಪ

ಉಡುಪಿ, ನ.13: ರಾಷ್ಟ್ರದಾದ್ಯಂತ ಎನ್.ಎಸ್.ಎಸ್. ಶಿಬಿರಗಳು ವಿದ್ಯಾರ್ಥಿಗಳನ್ನು ಗ್ರಾಮೀಣ ಬದುಕಿಗೆ ಬೆಸೆಯುವ...
error: Content is protected !!