Sunday, January 19, 2025
Sunday, January 19, 2025

ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕುಗಳ ಸಾಲ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

ಸರ್ಕಾರದ ಯೋಜನೆಗಳು ಹಾಗೂ ಬ್ಯಾಂಕುಗಳ ಸಾಲ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ

Date:

ಉಡುಪಿ, ನ.8: ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಸೌಲಭ್ಯಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶುಕ್ರವಾರ ನಗರದ ನಗರದ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕೆನರಾ ಬ್ಯಾಂಕ್ ಉಡುಪಿ ಇವರ ವತಿಯಿಂದ ಕೇಂದ್ರ ಸರಕಾರದ ಸಾಲ ಯೋಜನೆಗಳಾದ ಪಿ.ಎಂ ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ, ಮುದ್ರಾ ಯೋಜನೆ ಮತ್ತು ಇತರ ಸಾಲ ಯೋಜನೆಗಳ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಭಾರತ ದೇಶದಲ್ಲಿರುವ ಪರಂಪರೆಯುತವಾದ ಕುಲಕಸುಬುಗಳಿಗೆ ಶಕ್ತಿ ನೀಡುವ ಉದ್ದೇಶದಿಂದ ಪ್ರಧಾನ ಮಂತ್ರಿಗಳು ಪಿ.ಎಂ. ವಿಶ್ವಕರ್ಮ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯಡಿ ಬಡಗಿಗಳು, ಅಕ್ಕಸಾಲಿಗರು, ಕುಂಬಾರಿಕೆ, ಗಾರೆ ಕೆಲಸದವರು ಸೇರಿದಂತೆ ಸುಮಾರು 18 ಪಾರಂಪರಿಕ ವೃತ್ತಿ ನಡೆಸುವವರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಆರ್ಥಿಕ ಸೌಲಭ್ಯಗಳೊಂದಿಗೆ ಉಪಕರಣಗಳನ್ನು ನೀಡಲಾಗುತ್ತಿದ್ದು, ಸಾಮಾನ್ಯ ಬಡಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಒಟ್ಟು 16309 ಅರ್ಜಿಗಳು ಸ್ವೀಕೃತವಾಗಿದ್ದು, 14,362 ಅರ್ಜಿಗಳನ್ನು ಗ್ರಾಮ ಪಂಚಾಯತ್ ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಂದ ಜಿಲ್ಲಾ ಸಮಿತಿಗೆ ಹಾಗೂ ಜಿಲ್ಲಾ ಸಮಿತಿಯಿಂದ ರಾಜ್ಯ ಸಮಿತಿಗೆ ಒಟ್ಟು 8022 ಅರ್ಜಿಗಳನ್ನು ಶಿಫಾರಸ್ಸು ಮಾಡಲಾಗಿದೆ. 6338 ಅರ್ಜಿಗಳನ್ನು ಶಿಫಾರಸ್ಸು ಮಾಡಲು ಬಾಕಿ ಇದ್ದು, ಇವುಗಳಲ್ಲಿ ಟೈಲರಿಂಗ್ 5706 ಅರ್ಜಿಗಳು ಹಾಗೂ ಮೇಸನ್ಸ್ 632 ಅರ್ಜಿಗಳು ಒಳಗೊಂಡಿವೆ ಎಂದ ಅವರು, ರಾಜ್ಯ ಸಮಿತಿಯಿಂದ ಒಟ್ಟು 6723 ಅರ್ಜಿಗಳು ಅನುಮೋದನೆಗೊಂಡಿವೆ ಎಂದರು. ವಿಶ್ವಕರ್ಮ ಯೋಜನೆಯಡಿ ಕೆಲಸಗಾರರಿಗೆ ವೃತ್ತಿಯಲ್ಲಿ ಕೌಶಲ್ಯ ತುಂಬಿ ಸಾಲಸೌಲಭ್ಯ ಹಾಗೂ ಆಯ್ಕೆಯಾದ ಫಲಾನುಭವಿಗಳಿಗೆ ತರಬೇತಿ ನೀಡಿ, ನಂತರ ಕೇಂದ್ರ ಸರ್ಕಾರವು ಹದಿನೈದು ಸಾವಿರ ರೂ. ಮೌಲ್ಯದ ಉಪಕರಣಗಳನ್ನು ಫಲಾನುಭವಿಗಳಿಗೆ ನೀಡುತ್ತಿದ್ದು, ಎಲ್ಲಾ ಯೋಜನೆಗಳಿಗೂ ಮುಕ್ತವಾದ ಅವಕಾಶವನ್ನು ಮಾಡಿಕೊಡಲಾಗಿದೆ ಎಂದರು.

ಪಿ.ಎಂ ಉದ್ಯೋಗ ಸೃಜನಾ ಯೋಜನೆಯಡಿ ಜಿಲ್ಲೆಗೆ ಒಟ್ಟು 131 ಗುರಿ ನೀಡಲಾಗಿದ್ದು, ಈವರೆಗೆ ಒಟ್ಟು 434 ಅರ್ಜಿಗಳು ಸ್ವೀಕೃತಗೊಂಡು, 203 ಫಲಾನುಭವಿಗಳಿಗೆ ಒಟ್ಟು 21.12 ಕೋಟಿ ರೂ. ಸಾಲ ಮಂಜೂರಾಗಿ, 53 ಫಲಾನುಭವಿಗಳಿಗೆ ಒಟ್ಟು 161.04 ಲಕ್ಷ ರೂ. ಬಿಡುಗಡೆಯಾಗಿದೆ. ಪ್ರಧಾನ ಮಂತ್ರಿ ಯವರ ಮುದ್ರಾ ಯೋಜನೆಯಡಿ 18521 ಫಲಾನುಭವಿಗಳಿಗೆ 306 ಕೋಟಿ ರೂ. ಸಾಲ ಬಿಡುಗಡೆ ಮಾಡಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾರಿಗೊಳಿಸಲಾದ ಪ್ರಧಾನಮಂತ್ರಿ ಸ್ವ-ನಿಧಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಮೂರು ಹಂತದಲ್ಲಿ ಸಾಲ ಸೌಲಭ್ಯಗಳನ್ನು ನೀಡಲಾಗಿದ್ದು, ಕೇಂದ್ರ ಸರ್ಕಾರದ ಎಲ್ಲಾ ಸಾಲಯೋಜನೆಗಳು ಜನಸಾಮಾನ್ಯರಿಗೆ ಪರಿಣಾಮಕಾರಿಯಾಗಿ ತಲುಪಲು ಅಧಿಕಾರಿಗಳು ಸ್ಪಂದಿಸಬೇಕು ಎಂದರು. ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಸರ್ಕಾರದ ಹಾಗೂ ಬ್ಯಾಂಕುಗಳ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಅಧಿಕಾರಿಗಳು ಸಕಾರಾತ್ಮಕ ಭಾವನೆಯಿಂದ ಸ್ಪಂದಿಸಿ ಜನರ ಬದುಕಿಗೆ ಆಸರೆಯಾಗಬೇಕು ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆಯಿದ್ದು, ಯುವಜನತೆಗೆ ದಾರಿ ತೋರಿಸುವ ಕೆಲಸ ಸರ್ಕಾರ ಹಾಗೂ ಸಮಾಜದ ಜವಾಬ್ದಾರಿಯಾಗಿದೆ. ಪಿ.ಎಂ. ವಿಶ್ವಕರ್ಮ, ಪ್ರಧಾನ ಮಂತ್ರಿ ಉದ್ಯೋಗ ಸೃಜನಾ ಯೋಜನೆ, ಮುದ್ರಾ ಯೋಜನೆ ಹಾಗೂ ಸ್ವ-ನಿಧಿ ಸಾಲ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳು ಸುತ್ತಮುತ್ತಲಿನ ಜನರಿಗೆ ತಲುಪಿಸಿದಾಗ ಯೋಜನೆಯು ಫಲಪ್ರದವಾಗುತ್ತದೆ ಎಂದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸ್ವಯಂ ಉದ್ಯೋಗ ಹೊಂದಲು ಹಾಗೂ ಉದ್ಯೋಗ ಸೃಜನೆಗೆ ಇಂತಹ ಸಾಲ ಯೋಜನೆಗಳು ಸಹಕಾರಿಯಾಗಿದೆ. ದೇಶದ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ಮಹತ್ವದ್ದಾಗಿದ್ದು, ಸಾಲ ಯೋಜನೆಗಳಿಗೆ ಅರ್ಜಿ ಸಲ್ಲಿಸುವ ಫಲಾನುಭವಿಗಳ ಅರ್ಜಿಗಳು ತಿರಸ್ಕೃತವಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

ಶಾಸಕರಾದ ಎ ಕಿರಣ್ ಕುಮಾರ್ ಕೊಡ್ಗಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಮಣಿಪಾಲ ಕೆನರಾ ಬ್ಯಾಂಕ್ ವೃತ್ತ ಕಚೇರಿ ಮುಖ್ಯ ಪ್ರಬಂಧಕ ಜಯಪ್ರಕಾಶ್, ಪಿ.ಎಂ ಅನುಷ್ಠಾನ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ಶ್ರೀನಿಧಿ ಹೆಗಡೆ ಹಾಗೂ ಸುರೇಂದ್ರ ಫಣಿಯೂರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಾಲ ಯೋಜನೆಯ ಫಲಾನುಭವಿಗಳು, ಸ್ವಯಂ ಉದ್ಯೋಗಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಜಿ ಸ್ವಾಗತಿಸಿ, ಪ್ರಶಾಂತ್ ಹಾವಂಜೆ ನಿರೂಪಿಸಿ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ-1 ರ ಉಪ ಮಹಾಪ್ರಬಂಧಕಿ ಶೀಬಾ ಸಹಜನ್ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ: ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ನಿರ್ವಹಣೆಯ ಕುರಿತು ಕಾರ್ಯಗಾರ

ಮಣಿಪಾಲ, ಜ.18: ಸೆಂಟರ್ ಫಾರ್ ಕಮ್ಯೂನಿಟಿ ಆಂಕೋಲಜಿ, ಸಮುದಾಯ ವೈದ್ಯಕೀಯ ವಿಭಾಗ,...

ಡಿಸಿ ಕಚೇರಿಯ ಮೊದಲ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ

ಮಣಿಪಾಲ, ಜ.18: ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಉಡುಪಿ ತಾಲೂಕು...

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ತೀರ್ಮಾನ: ಮುಖ್ಯಮಂತ್ರಿ

ಮಂಗಳೂರು, ಜ.18: ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಮುಂದಿನ ಸಚಿವ...

ಎಮ್.ಜಿ.ಎಮ್. ಕಾಲೇಜಿನ ಉಚಿತ ಭೇೂಜನ ನಿಧಿಗೆ ದೇಣಿಗೆ ಹಸ್ತಾಂತರ

ಉಡುಪಿ, ಜ.18: ಎಂ.ಜಿ.ಎಂ. ಕಾಲೇಜಿನಲ್ಲಿ ಅರ್ಹ ಬಡ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ...
error: Content is protected !!