ಕೋಟ, ಅ.31: ಹಂಗಾರಕಟ್ಟೆ-ಐರೋಡಿಯ ಯಕ್ಷಗಾನ ಕಲಾಕೇಂದ್ರದ ಆಶ್ರಯದಲ್ಲಿ, ಕಲಾಕೇಂದ್ರದ ಸಂಸ್ಥಾಪಕ ದಿ.ಐರೋಡಿ ಸದಾನಂದ ಹೆಬ್ಬಾರರ ಸಂಸ್ಮರಣೆ, ಸದಾನಂದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಪ್ತೋತ್ಸವದ ಸಮಾರೋಪ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ನಡೆಯಿತು. ಯಕ್ಷಗಾನ ವಿದ್ವಾಂಸ ಡಾ.ಎಂ. ಪ್ರಭಾಕರ ಜೋಷಿ ಮಾತನಾಡಿ, ಯಕ್ಷಗಾನ ಕ್ಷೇತ್ರಕ್ಕೆ ಸದಾನಂದ ಹೆಬ್ಬಾರ್ ಅವರ ಕೊಡುಗೆ ಮಹತ್ವದ್ದು. ಯಕ್ಷಗಾನ ಕಲಾಕೇಂದ್ರದ ಮೂಲಕ ಸಾವಿರಾರು ಮಂದಿ ಉತ್ತಮ ಶಿಷ್ಯರನ್ನು ಅವರ ತಯಾರು ಮಾಡಿದ್ದು, ಕಲೆಯ ಮೂಲಸತ್ವವನ್ನು ಉಳಿಸಿಕೊಂಡು ಮುಂದೆ ಸಾಗಬೇಕಾದರೆ ಇಂತಹ ಕೇಂದ್ರಗಳು ಅಗತ್ಯ ಎಂದರು.
ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಂಸ್ಥೆಯು 50 ವರ್ಷ ಪೂರೈಸಿದ್ದು ಮುಂದಿನ ದಿನಗಳಲ್ಲಿ ಕೇಂದ್ರದ ಅಸ್ಥಿತ್ವಕ್ಕೆ ತೊಡಕಾಗಬಾರದು ಎನ್ನುವುದು ಎಲ್ಲ ಕಲಾಸಕ್ತರ ಆಶಯ. ಹೀಗಾಗಿ ಕನಿಷ್ಠ 2 ಕೋಟಿ ರೂಪಾಯಿ ಕಲಾಭಿಮಾನಿಗಳ ಸಹಕಾರದಿಂದ ಠೇವಣಿ ಇಟ್ಟು ಅದರ ಬಡ್ಡಿ ಮೊತ್ತದಲ್ಲಿ ನಿರಂತರ ಕಾರ್ಯಕ್ರಮ ಆಯೋಜಿಸುವ ಯೋಚನೆ ಕೇಂದ್ರಕ್ಕಿದೆ ಎಂದರು. ಒ.ಎನ್.ಜಿ.ಸಿ. ಸಂಸ್ಥೆಯ ನಿವೃತ್ತ ಮಹಾಪ್ರಬಂಧಕ ಬನ್ನಾಡಿ ನಾರಾಯಣ ಆಚಾರ್ಯ ಕಲಾಕೇಂದ್ರದೊಂದಿಗೆ ತನ್ನ ಒಡನಾಟವನ್ನು ಮೆಲುಕು ಹಾಕಿದರು. ಶಿಕ್ಷಕ, ರಂಗಭೂಮಿ ಕಲಾವಿದ, ಕನ್ನಡ ಸಾಹಿತ್ಯ ಪರಿಷತ್ತು ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳರಿಗೆ ಸದಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹುಬ್ಬಳ್ಳಿಯ ಹೋಟೆಲ್ ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ, ಯಕ್ಷ ಕಲಾಸಕ್ತ ಶಂಕರ ಐತಾಳ, ಸಾಲಿಗ್ರಾಮ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಮಾಜಿ ಅಧ್ಯಕ್ಷ ಎ.ಪಿ. ಐತಾಳ ಇದ್ದರು. ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಅಂಬರೀಷ್ ಭಟ್ ಸಂಸ್ಮರಣಾ ಮಾತುಗಳನ್ನಾಡಿದರು. ಚಿತ್ರಪಾಡಿ ಉಪೇಂದ್ರ ಸೋಮಯಾಜಿ ಸಮ್ಮಾನಿತರನ್ನು ಪರಿಚಯಿಸಿದರು. ಮೇಘಶ್ಯಾಮ್ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು. ಹೆರೆಂಜಾಲು ಪ್ರಶಾಂತ್ ಮಯ್ಯ ವಂದಿಸಿದರು.