ಉಡುಪಿ, ಅ.25: ಭಗವದ್ಗೀತೆಯಲ್ಲಿ ಕೃಷ್ಣ ಹೇಳಿದ ಯೋಗಸೂತ್ರಗಳನ್ನು ಅರ್ಜುನನಂತೆ ಬಾಬಾ ರಾಮದೇವ್ ವಿಶ್ವವ್ಯಾಪಕಗೊಳಿಸಿ ಜನರನ್ನು ಧರ್ಮಮಾರ್ಗದಲ್ಲಿ ಕರ್ತವ್ಯ ಭ್ರಷ್ಟರಾಗದಂತೆ ಜಾಗೃತಗೊಳಿಸುತ್ತಿದ್ದಾರೆ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ಹೇಳಿದರು. ಗೀತೆಯನ್ನು ಬಿಟ್ಟು ಯೋಗ ಇಲ್ಲ. ಶಾರೀರಿಕ ಮತ್ತು ಮಾನಸಿಕ ಸ್ವಾಸ್ಥ್ಯ ಎರಡಕ್ಕೂ ಶ್ರೀ ಕೃಷ್ಣನು ಗೀತೆಯಲ್ಲಿ ಪರಿಹಾರ ಸೂತ್ರಗಳನ್ನು ತಿಳಿಸಿದ್ದಾನೆ. ಅದರಂತೆ ನಾವು ಗೀತೆಯ ತತ್ವಗಳನ್ನು ಜಗತ್ತಿಗೆ ತಿಳಿಸಿಕೊಡುವ ಪ್ರಯತ್ನ ಮಾಡುತ್ತಿದ್ದರೆ ಬಾಬಾ ರಾಮದೇವ ಯೋಗ ಸೂತ್ರಗಳನ್ನು ವ್ಯಾಪಕಗೊಳಿಸುತ್ತಿದ್ದಾರೆ. ಆ ನೆಲೆಯಲ್ಲಿ ಈ ಕಾರ್ಯಕ್ರಮ ಗೀತಾ ಯೋಗ ಸಂಗಮ ಎಂದು ಬಣ್ಣಿಸಿದರು.
ನಿತ್ಯ 5 ಕೋಟಿ ಜನರಿಂದ ಯೋಗ: ಬಾಬಾ ರಾಮದೇವ್
ಯೋಗ ಗುರು ಬಾಬಾ ರಾಮದೇವ್ ಮಾತನಾಡಿ, ಪತಂಜಲಿ ಯೋಗ ಪೀಠದ ಮೂಲಕ ನಿತ್ಯ ದೇಶ ಮತ್ತು ಹೊರದೇಶಗಳಲ್ಲಿ 5 ಕೋಟಿ ಜನ ಯೋಗಾಭ್ಯಾಸ ಪ್ರಾಣಾಯಾಮಗಳನ್ನು ನಡೆಸುತ್ತಿದ್ದಾರೆ. ಇದನ್ನು ವೃದ್ಧಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆಧುನಿಕವಾದ ಜಗತ್ತಿನಲ್ಲಿ ಮನುಷ್ಯನ ಆರೋಗ್ಯ ಮೇಲಾಗುತ್ತಿರುವ ದುಷ್ಪರಿಣಾಮಗಳಿಗೆ ಭಾರತೀಯ ಯೋಗ ಒಂದೇ ಪರಿಹಾರ ಎಂದು ಇಡೀ ಜಗತ್ತಿಗೆ ಅರ್ಥವಾಗುತ್ತಿದೆ. ಜೀವನ ಕ್ರಮಗಳಿಂದ ನಮ್ಮ ಶರೀರದಲ್ಲಿ ವ್ಯಯವಾಗುತ್ತಿರುವ ಧನಾತ್ಮಕ ಶಕ್ತಿಗಳನ್ನು ಪುನರುಜ್ಜೀವನಗೊಳಿಸಲು ಆಧುನಿಕ ವೈದ್ಯ ಶಾಸ್ತ್ರದಿಂದ ಯಾವುದೇ ಉಪಾಯಗಳಿಲ್ಲ. ಅಲ್ಲಿ ಕೇವಲ ರಾಸಾಯನಿಕ ಔಷಧಿಗಳನ್ನು ಕೊಡುತ್ತಾರೆ. ಅದರಿಂದ ಮತ್ತಷ್ಟು ಋಣಾತ್ಮಕ ಪರಿಣಾಮಗಳಾಗುತ್ತಿವೆ . ಆದರೆ ಯೋಗದಿಂದ ಮಾತ್ರ ಶರೀರದಲ್ಲಿ ವ್ಯಯವಾದ ಶಕ್ತಿಯನ್ನು ಮತ್ತೆ ಉತ್ಪಾದಿಸಲು ಸಾಧ್ಯವಿದೆ ಮತ್ತು ಅದರಲ್ಲಿ ಯಾವುದೇ ನೆಗೆಟಿವ್ ಪರಿಣಾಮಗಳೂ ಇಲ್ಲ ಎಂದು ವ್ಯಾಖ್ಯಾನಿಸಿದರು. ಆದ್ದರಿಂದ ಪ್ರತಿಯೊಬ್ಬರೂ ಪ್ರತಿನಿತ್ಯ ಕನಿಷ್ಠ ಅರ್ಧ ಘಂಟೆ ಯೋಗ ಪ್ರಾಣಾಯಾಮಗಳನ್ನು ಕಡ್ಡಾಯವಾಗಿ ಮಾಡಿ ರೋಗಮುಕ್ತರಾಗುವುದು ಮಾತ್ರಲ್ಲ ಅದ್ಭುತ ಸಾಮರ್ಥ್ಯವುಳ್ಳ ವ್ಯಕ್ತಿಗಳಾಗಬೇಕು ಎಂದು ಕರೆ ನೀಡಿದರು.
ಜಗದ್ಗುರು ಮಧ್ವಾಚಾರ್ಯರಂಥ ನಮ್ಮ ಪೂರ್ವಸೂರಿಗಳು ತಮ್ಮ ಜೀವನದಲ್ಲಿ ಯೋಗಸೂತ್ರಗಳನ್ನು ಅಳವಡಿಸಿಕೊಂಡೇ ಮಹಾಪುರುಷರಾದರು. ಅಂಥ ಮಹಾತ್ಮರು ಹಾಕಿಕೊಟ್ಟ ಸತ್ಪರಂಪರೆಯಿಂದ ಇವತ್ತು ಸುಖೀ ಸ್ವಸ್ಥ ಸುಶಿಕ್ಷಿತ ಸಮಾಜ ನಿರ್ಮಾಣದ ಕಾರ್ಯಗಳಾಗುತ್ತಿರುವುದನ್ನು ಸಮಾಜ ಗಮನಿಸಬೇಕು ಎಂದರು. ಪುತ್ತಿಗೆ ಶ್ರೀಗಳು ಹಮ್ಮಿಕೊಂಡ ಗೀತಾಭಿಯಾಮವನ್ನು ಪ್ರಶಂಶಿಸಿದ ರಾಮ್ ದೇವ್, ಪ್ರಸ್ತುತ ಅವರ ಸನ್ಯಾಸ ಜೀವನಕ್ಕೂ ಹಾಗೂ ತಮ್ಮ ಯೋಗಪ್ರಸಾರಜೀವನಕ್ಕೂ ಸುವರ್ಣ ಮಹೋತ್ಸವ ವರ್ಷಗಳಾಗುತ್ತಿರುವುದು ಕಾಕತಾಳೀಯ ಎಂದರು. ಪೀಠದ ಯೋಗಾಧಿಕಾರಿ ಸ್ವಾಮೀ ಪರಮಾರ್ಥ ಜೀ , ರಾಜ್ಯ ಪ್ರಭಾರಿ ಭವರ್ ಲಾಲ್ ಆರ್ಯ, ಮಠದ ದಿವಾನರಾದ ನಾಗರಾಜಾಚಾರ್ಯ, ಪ್ರಸನ್ನಾಚಾರ್ಯ, ಜಿಲ್ಲಾ ಕೇಂದ್ರದ ವೇಂಕಟೇಶ ಮೆಹಂದಳೆ, ರಾಘವೇಂದ್ರ ಭಟ್, ಮೊದಲಾದವರಿದ್ದರು.