Sunday, February 23, 2025
Sunday, February 23, 2025

ರಾಣಿ ಚೆನ್ನಮ್ಮರ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿ: ಜಿಲ್ಲಾಧಿಕಾರಿ

ರಾಣಿ ಚೆನ್ನಮ್ಮರ ವ್ಯಕ್ತಿತ್ವ ಮಹಿಳೆಯರಿಗೆ ಮಾದರಿ: ಜಿಲ್ಲಾಧಿಕಾರಿ

Date:

ಉಡುಪಿ, ಅ.23: ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ ದಿಟ್ಟ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. ಅವರ ಹೋರಾಟದ ಮನೋಭಾವ, ಆತ್ಮವಿಶ್ವಾಸ, ಶೌರ್ಯ, ಪರಾಕ್ರಮಗಳ ವ್ಯಕ್ತಿತ್ವ ಪ್ರತಿಯೊಬ್ಬ ಮಹಿಳೆಯರಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು. ಅವರು ಬುಧವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ, 200 ವರ್ಷ ಪೂರೈಸಿರುವ ಹಿನ್ನೆಲೆ, ರಾಜ್ಯ ಸರ್ಕಾರವು ಕಿತ್ತೂರು ಉತ್ಸವ -2024 ರ ಪ್ರಯುಕ್ತ ವಿಜಯ ಜ್ಯೋತಿ ರಥಯಾತ್ರೆಯನ್ನು ಆಯೋಜಿಸಿದ್ದು, ರಥವು ರಾಜ್ಯದಾದ್ಯಂತ ಸಂಚರಿಸುವ ಮೂಲಕ ರಾಣಿ ಚೆನ್ನಮ್ಮರ ಸಂದೇಶ, ಸಾಹಸಗಾಥೆಯ ಬಗ್ಗೆ ಸಮಾಜಕ್ಕೆ ತಿಳಿಸುವ ಮೂಲಕ ಅರಿವು ಮೂಡಿಸಲಾಗಿದೆ ಎಂದರು.

ಮಹಿಳೆ ಮನಸ್ಸು ಮಾಡಿದರೇ ಯಾವ ಸಾಧನೆಯನ್ನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಸೂಕ್ತ ನಿದರ್ಶನ ಕಿತ್ತೂರು ರಾಣಿ ಚೆನ್ನಮ್ಮ. ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಜೀವನ ನಡೆಸಿದ ಚೆನ್ನಮ್ಮರ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅದನ್ನು ಪಾಲಿಸಬೇಕು ಎಂದರು. ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್ ಮಾತನಾಡಿ, ರಾಣಿ ಚೆನ್ನಮ್ಮರ ದಿಟ್ಟತನ ಹಾಗೂ ಸ್ವಾಭಿಮಾನದ ಪ್ರತೀಕವಾದ ಜೀವನಶೈಲಿಯನ್ನು ಮಹಿಳೆಯರು ಸ್ಪೂರ್ತಿಯಾಗಿರಿಸಿಕೊಂಡು, ಆಧುನಿಕ ಸಮಾಜದಲ್ಲಿ ಪ್ರತಿನಿತ್ಯ ಎದುರಾಗುವ ಸವಾಲುಗಳನ್ನು ಮೆಟ್ಟಿ ನಿಲ್ಲಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಿತ್ತೂರು ರಾಣಿ ಚೆನ್ನಮ್ಮ ಅವರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ಬಾಲ್ಯದಿಂದಲೇ ಧೀರ ಮಹಿಳೆಯಾಗಿ ರೂಪುಗೊಂಡಿದ್ದ ಇವರು ಪುರುಷರಿಗೆ ಸರಿಸಮಾನವಾದ ಕತ್ತಿವರಸೆ, ಕುದುರೆ ಸವಾರಿ ಮುಂತಾದ ಕೌಶಲ್ಯಗಳನ್ನು ಮೈಗೂಡಿಸಿಕೊಂಡಿದ್ದರು. ಚೆನ್ನಮ್ಮಳು ತನ್ನ ಸಂಸ್ಥಾನ ಹಾಗೂ ಸ್ವಾತಂತ್ರ್ಯ ಉಳಿಸಿಕೊಳ್ಳಲು ನಡೆಸಿದ ಹೋರಾಟ, ತ್ಯಾಗ ಇಂದಿಗೂ ಜನಮಾನಸದಲ್ಲಿ ಅಚ್ಛಳಿಯದೇ ಉಳಿದಿದೆ ಎಂದರು. ರಾಣಿ ಚೆನ್ನಮ್ಮನವರ ಪರಾಕ್ರಮ, ಕೆಚ್ಚದೆಯ ಯುದ್ಧಕಲೆ ಹಾಗೂ ಜೀವಿತ ಕಾಲದುದ್ದಕ್ಕೂ ಹಂಗಿನ ಜೀವನಕ್ಕೆ ಆಸೆ ಪಡದೆ ಜೀವನ ನಡೆಸಿದ ರೀತಿ ಸದಾ ಸ್ಮರಣೀಯ. ಸ್ವಾತಂತ್ರö್ಯ ಹೋರಾಟದಲ್ಲಿ ಮುಖ್ಯ ವಾಹಿನಿಯಲ್ಲಿ ನಿಂತು ಬ್ರಿಟಿಷರ ವಿರುದ್ಧ ನಿರ್ಭೀತಿಯಿಂದ ಹೋರಾಡಿದ ಚೆನ್ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಕೃಷಿ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ ನಾಯ್ಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಹಾಕಪ್ಪ ಆರ್ ಲಮಾಣಿ, ಕ.ಸಾ.ಪ ದ ಮನೋಹರ್ ಹಾಗೂ ನರಸಿಂಹಮೂರ್ತಿ, ಕರ್ನಾಟಕ ರಕ್ಷಣಾ ವೇದಿಕೆಯ ಉಪಾಧ್ಯಕ್ಷ ಪ್ರಭಾಕರ ಪೂಜಾರಿ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ನಿರೂಪಿಸಿದರೆ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಅಧ್ಯಕ್ಷ ಸಿದ್ದಬಸಯ್ಯ ಸ್ಯಾಮಿ ಚಿಕ್ಕಮಠ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!