Monday, February 24, 2025
Monday, February 24, 2025

ಬಾರಕೂರಿನ ಭಂಡಾರಕೇರಿ ಮಠ: ವಿಜಯನಗರ ತುಳುವ ಮನೆತನದ ಶಾಸನಗಳ ಅಧ್ಯಯನ

ಬಾರಕೂರಿನ ಭಂಡಾರಕೇರಿ ಮಠ: ವಿಜಯನಗರ ತುಳುವ ಮನೆತನದ ಶಾಸನಗಳ ಅಧ್ಯಯನ

Date:

ಬ್ರಹ್ಮಾವರ, ಅ.10: ಬ್ರಹ್ಮಾವರ ತಾಲೂಕಿನ ಬಾರಕೂರಿನ ಭಂಡಾರಕೇರಿ ಮಠದಲ್ಲಿರುವ ವಿಜಯನಗರ-ತುಳುವ ಮನೆತನಕ್ಕೆ ಸೇರಿದ‌‌‌ ಎರಡು ಶಾಸನಗಳ ಅಧ್ಯಯನವನ್ನು‌ ಭಂಡಾರಕೇರಿ ಮಠದ ಶ್ರೀ ‌ಶ್ರೀ‌ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿಗಳ ಅನುಮತಿಯ ಮೇರೆಗೆ ಶ್ರೀನಿಕೇತನ ವಸ್ತುಸಂಗ್ರಹಾಲಯ ಮತ್ತು ಕೆಳದಿ ರಾಣಿ ಚೆನ್ನಮ್ಮಾಜಿ ‌ಅಧ್ಯಯನ‌‌ ಪೀಠ-ಕುಕ್ಕೆ‌ ಸುಬ್ರಹ್ಮಣ್ಯ ‌ಇಲ್ಲಿನ‌ ಸ್ಥಾಪಕ ನಿರ್ದೇಶಕರಾದ ಡಾ. ಜಿ.ವಿ.‌ ಕಲ್ಲಾಪುರ ಮತ್ತು ಉಪನಿರ್ದೇಶಕರಾದ‌ ಶ್ರುತೇಶ್‌ ಆಚಾರ್ಯ ಮೂಡುಬೆಳ್ಳೆ ಇವರುಗಳು ಮಾಡಿರುತ್ತಾರೆ. ಈ ಎರಡೂ‌ ಶಾಸನಗಳ ಉಲ್ಲೇಖಗಳು ಎಲ್ಲಿಯೂ ‌ಲಭ್ಯವಾಗದಿರುವುದರಿಂದ ಶಾಸನ ಅಧ್ಯಯನವನ್ನು ಕೈಗೊಳ್ಳಲಾಗಿದೆ‌. ಪ್ರಸ್ತುತ ಎರಡೂ ಶಾಸನಗಳು ತೃಟಿತಗೊಂಡಿದ್ದು,‌ ಗ್ರಾನೈಟ್ (ಕಣ‌) ಶಿಲೆಯಲ್ಲಿ ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ಕೊರೆಯಲ್ಪಟ್ಟಿದೆ.

ವಿಜೆಯಪ್ಪ ಒಡೆಯನ ಜೈನ ಶಾಸನ
ವಿಜಯನಗರ ತುಳುವ ದೊರೆ‌ ಕೃಷ್ಣದೇವರಾಯನ‌ ಕಾಲಕ್ಕೆ (ಸಾ.ಶ.ವ 1509-29) ಸೇರುವ ಜೈನ ಶಾಸನವು, ‌ಬಾರಕೂರಿನ ರಾಜ್ಯಪಾಲನಾಗಿದ್ದ ವಿಜೆಯಪ್ಪ ಒಡೆಯ‌ನನ್ನು (ಸಾ.ಶ.ವ 1519-20) ಉಲ್ಲೇಖಿಸುತ್ತದೆ. ಪ್ರಸ್ತುತ 11 ಸಾಲುಗಳನ್ನು ಮಾತ್ರ ಹೊಂದಿರುವ ಈ ಶಾಸನದಲ್ಲಿ ಚಂದ್ರಗ್ರಹಣದ‌ ಸಂದರ್ಭದಲ್ಲಿ ಮಾಡಿದ‌ ದಾನದ ಕುರಿತಾಗಿ ತಿಳಿಸುತ್ತದೆ. ರಘುವರ ತೀರ್ಥ ಸ್ವಾಮೀಜಿ ಹಾಗೂ ಶ್ರೀ ಗೋಪಿನಾಥ‌ ದೇವರ ಉಲ್ಲೇಖದ ಜೊತೆಗೆ ಕೊಟ್ಟಿರುವ ದಾನಕ್ಕೆ‌ ಸಾಕ್ಷಿಯಾಗಿ ಹೊಸವಳಲ (ಪ್ರಸ್ತುತ ಹೊಸಾಳ) ಜಂನಿಗಳ ಮತ್ತು ವಿಜೆಯಪ್ಪ ಒಡೆಯರ‌ ಒಪ್ಪ ಎಂದು ಹೇಳಿದೆ. ಶಾಪಾಶಯ ವಾಕ್ಯದೊಂದಿಗೆ “ಶ್ರೀ ವಿತರಾಗ‌” ಎಂಬ ಜಿನ ಒಕ್ಕಣೆಯೊಂದಿಗೆ ಶಾಸನ ಮುಕ್ತಾಯಗೊಂಡಿರುತ್ತದೆ.

ಅಚ್ಯುತರಾಯನ ಶಾಸನ
ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯನ್ನು ಬಿಟ್ಟರೆ‌ ಉಳಿದ ಕೆತ್ತನೆಗಳು‌ ಸಂಪೂರ್ಣವಾಗಿ ‌ನಶಿಸಿ‌‌ ಹೋಗಿರುತ್ತದೆ. ಗಣಪತಿ ಸ್ತುತಿಯೊಂದಿಗೆ ಪ್ರಾರಂಭವಾಗುವ ಈ ಶಾಸನದಲ್ಲಿ ಪ್ರಸ್ತುತ 18 ಸಾಲುಗಳು ಮಾತ್ರವಿದ್ದು, ಉಳಿದ ಭಾಗವು ನಶಿಸಿ ಹೋಗಿರುತ್ತದೆ. ಶಕವರುಷ 1460 (ಸಾ.ಶ.ವ 1539) ರ ವಿಕಾರಿ ಸಂವತ್ಸರದ ಮಾಘ ಶುದ್ಧ 15 ರ ಕಾಲಮಾನವನ್ನು ಒಳಗೊಂಡಂತೆ, ಬಾರಕೂರ ರಾಜ್ಯವನ್ನು ವಿಜಯನಗರ ತುಳುವ ದೊರೆ ಅಚ್ಯುತರಾಯನ (ಸಾ.ಶ.ವ 1529-42) ಆಜ್ಞೆಯಂತೆ ಸಾಂಕಣ ನಾಯಕನ ನಿರೂಪದಿಂದ ಕೊಂಡಮರಸ ಒಡೆಯನು ಆಳ್ವಿಕೆ ಮಾಡುತ್ತಿದ್ದ‌ ಎಂಬುದು ತಿಳಿಯುತ್ತದೆ. ಕೊಂಡಮರಸ‌ ಒಡೆಯನು ಅಚ್ಯುತರಾಯನ ಆಯುರಾರೋಗ್ಯ‌ ಆಯುಷ್ಯಾಭಿವೃದ್ಧಿಯ ಸಲುವಾಗಿ ಭಂಡಾರಕೇರಿಯ ಮೂಡ‌ಮಠದ‌ ಹಿರಣ್ಯ‌ನಾಥ (ಹಿರಣ್ಯಗರ್ಭ) ತೀರ್ಥ ಸ್ವಾಮಿಗಳ‌ ಶಿಷ್ಯರಾದ ಶ್ರೀ ರಘುವರ ತೀರ್ಥ‌‌ ಶ್ರೀಪಾದಂಗಳು ಆರಾಧನೆಯ ಮಾಡುವ ದೇವರ (ಶ್ರೀ‌ ಗೋಪಿನಾಥ) ಅಮೃತಪಡಿ‌ ಮತ್ತು ನಂದಾದೀಪ್ತಿಗೆ ಬಿಟ್ಟ ಭೂ‌ದಾನದ‌ ವಿವರವನ್ನು‌ ಶಾಸನವು ಉಲ್ಲೇಖಿಸುತ್ತದೆ. ವರಹ ಗದ್ಯಾಣ 40ನು‌ ಗೋಪಿನಾಥ ದೇವರಿಗೆ ಕಾಲ-ಕಾಲಕ್ಕೆ ನೀಡುತ್ತಿದ್ದರು ಮತ್ತು ನೀಲಾವರ, ತೆಕ್ಕಟ್ಟೆ ಪ್ರದೇಶದ ಉಲ್ಲೇಖವನ್ನು‌ ಸಹ ಶಾಸನದಲ್ಲಿ ನೋಡಬಹುದು.

ಅಚ್ಯುತರಾಯನ ಈ ಶಾಸನದಿಂದ ಮಹತ್ವದ ವಿಚಾರವೊಂದು ಬೆಳಕಿಗೆ ಬರುತ್ತದೆ. ಅದೇನೆಂದರೆ ಕೊಂಡಮರಸ‌ ಒಡೆಯನ ಆಳ್ವಿಕೆಯ ‌ಕಾಲವು 3 ವರ್ಷಗಳ ಕಾಲ ವಿಸ್ತಾರವಾಗಿರುವುದು. ಅಂದರೆ ಪ್ರಾರಂಭದ ದಿನಗಳಲ್ಲಿ ಈತನ ಕಾಲವನ್ನು ಸಾ.ಶ.ವ 1533-36 ಎಂದು ತಿಳಿಯಲಾಗಿತ್ತು. ಆದರೆ ಅಧ್ಯಯನ ಶಾಸನದ ಕಾಲಮಾನವು ಸಾ.ಶ.ವ 1539ಕ್ಕೆ ಸೇರುವುದರಿಂದ ಕೊಂಡಮರಸ‌ 1539ರವರೆಗೆ ಅಥವಾ 1539ರಲ್ಲಿಯೂ ಆಳ್ವಿಕೆ‌ ಮಾಡಿರುವುದು ಕಂಡುಬರುತ್ತದೆ. ಮಾತ್ರವಲ್ಲದೇ ರಘುವರತೀರ್ಥ ಶ್ರೀಪಾದಂಗಳ ಕಾಲಮಾನವನ್ನು ಸಹ ಈ ಶಾಸನದಿಂದ ತಿಳಿಯಬಹುದಾಗಿದೆ. ಹಾಗಾಗಿ‌ ಅಧ್ಯಯನಕ್ಕೊಳಗಾದ ಶಾಸನಗಳು ತುಳುನಾಡಿನ‌ ಇತಿಹಾಸ ಅಧ್ಯಯನಕ್ಕೆ ಹೊಸ ಆಯಾಮವನ್ನು ತಂದುಕೊಟ್ಟಿವೆ ಎಂದು ಹೇಳಬಹುದು. ‌

ಕ್ಷೇತ್ರಕಾರ್ಯ ಶೋಧನೆಯಲ್ಲಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ,‌ ಇದರ ಅಧ್ಯಯನ ‌ನಿರ್ದೇಶಕರಾದ ಪ್ರೊ.‌ ಎಸ್.ಎ ಕೃಷ್ಣಯ್ಯ ಹಾಗೂ ಮಠದ ಸಿಬ್ಬಂದಿ ಕುಶಾಲ ದೇವಾಡಿಗ, ಪುರಾತತ್ತ್ವ ‌ಸಂಶೋಧನಾರ್ಥಿಗಳಾದ ಮಂಜುನಾಥ ನಂದಳಿಕೆ, ಶ್ರಾವ್ಯಾ ಆರ್ ಮತ್ತು ಯಶಸ್ವಿನಿ ಆಚಾರ್ಯ ಸಹಕಾರ ನೀಡಿರುತ್ತಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.24: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.24: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!