ಉಡುಪಿ, ಸೆ.27: ನ್ಯಾಯಾಲಯ ಮತ್ತು ವಕೀಲರ ಸಂಘಕ್ಕೆ 125 ವರ್ಷಗಳು ತುಂಬಿದ್ದು, ಈ ಶತಮಾನೋತ್ತರ ರಜತ ಮಹೋತ್ಸವ ಸಮಾರಂಭವನ್ನು ನ.17 ಮತ್ತು 18ರಂದು ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಶತಮಾನೋತ್ತರ ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮತ್ತು ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಹೋತ್ಸವದ ಲೋಗೋ ಅನಾವರಣಗೊಳಿಸಿ ಅವರು ಮಾತನಾಡಿದರು.
ನ.17ರ ಬೆಳಗ್ಗೆ ಜೋಡುಕಟ್ಟೆಯಿಂದ ನ್ಯಾಯಾಲಯದ ಆವರಣದ ವರೆಗೆ ಮೆರವಣಿಗೆ ಇರಲಿದೆ. ಬೆಳಗ್ಗೆ 10ಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಆಂಧ್ರಪ್ರದೇಶದ ರಾಜ್ಯಪಾಲ ನ್ಯಾ. ಎಸ್.ಅಬ್ದುಲ್ ನಝೀರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ, ರಾಮಚಂದ್ರ ಡಿ.ಹುದ್ದಾರ್, ಟಿ.ವೆಂಕಟೇಶ್ ನಾಯ್ಕ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್.ಭರತ್ ಕುಮಾರ್ ಮತ್ತು ಉಡುಪಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣನವರ್ ಭಾಗವಹಿಸಲಿದ್ದಾರೆ.
ನ.18ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ. ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಇ.ಎಸ್.ಇಂದಿರೇಶ್ ಸಮಾರೋಪ ಭಾಷಣ ಮಾಡಲಿದ್ದು, ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶಿವಶಂಕರ ಬಿ.ಅಮರಣ್ಣವರ್, ಸಿಎಂ ಜೋಷಿ, ಟಿ.ಜಿ.ಶಿವಶಂಕರೇ ಗೌಡ, ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್.ಗಂಗಣ್ಣವರ್ ಭಾಗವಹಿಸಲಿದ್ದಾರೆ ಎಂದರು. ಜಿಲ್ಲಾದ್ಯಂತ ಸುಮಾರು 1,300 ನ್ಯಾಯವಾದಿಗಳು ಭಾಗವಹಿಸಲಿದ್ದು, ದ.ಕ., ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ನ್ಯಾಯವಾದಿಗಳನ್ನೂ ಆಹ್ವಾನಿಸಲಾಗುವುದು ಎಂದು ರೆನೋಲ್ಡ್ ಪ್ರವೀಣ್ ಕುಮಾರ್ ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್., ರಜತ ಮಹೋತ್ಸವ ಸಮಿತಿ ಖಜಾಂಚಿ ವಿಲ್ಫೆಡ್ ಓಸ್ವಾಲ್ಡ್ ಡಿ ಮೆಲ್ಲೋ, ಉಡುಪಿ ವಕೀಲರ ಸಂಘದ ಪದಾಧಿಕಾರಿಗಳಾದ ಮಿತ್ರ ಕುಮಾರ್ ಶೆಟ್ಟಿ, ಬೈಲೂರು ರವೀಂದ್ರ ದೇವಾಡಿಗ, ಸಂತೋಷ್ ಕುಮಾರ್ ಮೂಡುಬೆಳ್ಳೆ, ಗಂಗಾಧರ ಎಚ್.ಎಂ., ಆರೂರು ಸುಕೇಶ್ ಶೆಟ್ಟಿ, ವಿವಿಧ ಸಮಿತಿಗಳ ಸಂಯೋಜಕರಾದ ಸಂಜೀವ ಎ., ಎಂ.ಶಾಂತಾರಾಮ ಶೆಟ್ಟಿ, ಎನ್.ಕೆ.ಆಚಾರ್ಯ, ಬಿ.ನಾಗರಾಜ, ದಿನೇಶ್ ಬಿ.ಶೆಟ್ಟಿ, ಆನಂದ ಮಡಿವಾಳ, ಸತೀಶ್ ಪೂಜಾರಿ, ಅಸದುಲ್ಲಾ ಕಟಪಾಡಿ, ಅಮೃತಕಲಾ, ಸ್ಮರಣ ಸಂಚಿಕೆಯ ಸಂಪಾದಕ ಶಶೀಂದ್ರ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.