ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಎಚ್. ಕೆ. ಪಾಟೀಲ್ ಅವರನ್ನು ವಿಧಾನಸೌಧದಲ್ಲಿ ಭೇಟಿಯಾಗಿ ನವೆಂಬರ್ 17 ಮತ್ತು 18ರಂದು ನಡೆಯಲಿರುವ ಉಡುಪಿ ನ್ಯಾಯಾಲಯ ಹಾಗೂ ವಕೀಲರ ಸಂಘದ ಶತಮಾನೋತ್ತರ ಬೆಳ್ಳಿ ಹಬ್ಬ (125ನೇ ವಾರ್ಷಿಕೋತ್ಸವ) ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸುವಂತೆ ಆಹ್ವಾನಿಸಿತು. ಇದಕ್ಕೆ ಸಮ್ಮತಿಸಿದ ಸಚಿವರು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬ್ರಹ್ಮಾವರದ ಸಂಚಾರಿ ನ್ಯಾಯಾಲಯದಲ್ಲಿ ಅಗಾಧ ಸಂಖ್ಯೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಆದಷ್ಟು ಶೀಘ್ರ ಬ್ರಹ್ಮಾವರಕ್ಕೆ ಖಾಯಂ ನ್ಯಾಯಾಲಯ ಮಂಜೂರು ಮಾಡುವ ಬಗ್ಗೆ ಸಚಿವರಲ್ಲಿ ಚರ್ಚಿಸಲಾಯಿತು.
ನಿಯೋಗದಲ್ಲಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ್ ಕುಮಾರ್, ಪದಾಧಿಕಾರಿಗಳಾದ ಆರೂರ್ ಸುಕೇಶ್ ಶೆಟ್ಟಿ, ರವೀಂದ್ರ ಬೈಲೂರ್, ಸಂತೋಷ್ ಕುಮಾರ್ ಮೂಡುಬೆಳ್ಳೆ, ಪ್ರಜ್ವಲ್ ಶೆಟ್ಟಿ ಹಾಗೂ ನ್ಯಾಯವಾದಿ ಶಶಿರಾಜ್ ಕೋಟ್ಯಾನ್ ಉಪಸ್ಥಿತರಿದ್ದರು.