ಕಾರ್ಕಳ, ಸೆ.20: ಸೋತಾಗ ಸವಾಲು, ಗೆದ್ದಾಗ ಸಂತೋಷ ನೀಡುತ್ತಾ ಬೆಳೆಯಲು ಅವಕಾಶವಿದ್ದರೆ ಅದು ಕ್ರೀಡಾ ಕ್ಷೇತ್ರದಲ್ಲಿ ಮಾತ್ರ ಎಂದು ಕುಕ್ಕುಂದೂರಿನ ಕೆ.ಎಂ.ಇ.ಎಸ್. ಪ.ಪೂ.ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರು ಹೇಳಿದರು. ಅವರು ಶಾಲಾ ಶಿಕ್ಷಣ ಇಲಾಖೆ(ಪ.ಪೂ.ಕಾಲೇಜು) ಹಾಗೂ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ ಬಾಲಕ- ಬಾಲಕಿಯರ ಬಾಸ್ಕೆಟ್ ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಪಠ್ಯೇತರ ಚಟುವಟಿಕೆಯು ವಿದ್ಯಾರ್ಥಿಯ ಜೀವನಕ್ಕೆ ರಹದಾರಿ. ಶಿಕ್ಷಣವೆಂದರೆ ಬರಿಯ ಓದಲ್ಲ ಅದು ಮಾನವೀಯ ವಿಕಾಸದ ದಾರಿ. ಕ್ರೀಡಾಚಟುವಟಿಕೆಗಳಲ್ಲಿ ಪಾಲ್ಗೊಂಡವನು ಕುಗ್ಗಿದ ಉದಾಹರಣೆ ತೀರ ವಿರಳ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯಕಾರ್ಯನಿರ್ವಹಣಾಧಿಕಾರಿ ದಿನೇಶ್ ಎಂ ಕೊಡವೂರ್ ವಹಿಸಿದ್ದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಸಂಯೋಜನಾಧಿಕಾರಿ ದಿನೇಶ್ ಕುಮಾರ್, ದೈ.ಶಿ.ಉಪನ್ಯಾಸಕ ಸಂಘದ ಅಧ್ಯಕ್ಷ ಸತೀಶ್ ಹೆಗ್ಡೆ, ತಾ.ದೈ.ಶಿ.ಉಪನ್ಯಾಸಕ ಸಂಘದ ಮೇಲ್ವಿಚಾರಕ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಪಿ.ಆರ್.ಒ ಜ್ಯೋತಿ ಪದ್ಮನಾಭ ಭಂಡಿ ಸ್ವಾಗತಿಸಿ, ಕಾಲೇಜಿನ ದೈ.ಶಿ.ಉಪನ್ಯಾಸಕಿ ಸೌಜನ್ಯ ಹೆಗ್ಡೆ ವಂದಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.