ಉಡುಪಿ, ಸೆ.18: ಉಡುಪಿ ತಾಲೂಕು ವ್ಯವಸಾಯ ಉತ್ಪನ್ನ ಸಹಕಾರ ಮಾರಾಟ ಸಂಘ (ಉಡುಪಿ ಟಿ.ಎ.ಪಿ.ಸಿ.ಎಂ.ಎಸ್. ಲಿ) 2023-24ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಅಜ್ಜರಕಾಡು ಪುರಭವನದ ಮಿನಿ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ. ಅಶೋಕ ಕುಮಾರ್ ಶೆಟ್ಟಿ ಮೈರ್ಮಾಡಿ ಕರ್ಜೆ, ಮಾತನಾಡಿ, ಸಂಘವು ಪ್ರಸ್ತುತ ವರ್ಷದಲ್ಲಿ 550 ಕೋಟಿ ರೂ. ವ್ಯವಹಾರ ನಡೆಸಿ 56.16 ಲಕ್ಷ ರೂ. ನಿವ್ವಳ ಲಾಭ ಗಳಿಸಿ, ಶೇ.15 ಡಿವಿಡೆಂಡ್ ಘೋಷಿಸಿದೆ. ಸಂಘವು 129 ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಸಂಘದ ಠೇವಣಿ ತುಲನೆ ಮಾಡುವಾಗ ಕಳೆದ ವರ್ಷಕ್ಕಿಂತಲೂ ಶೇ.11.70 ಹೆಚ್ಚಳವಾಗಿ ಪ್ರಸ್ತುತ 123 ಕೋಟಿ ರೂ. ಇದೆ. ಪ್ರಸ್ತುತ 110 ಕೋಟಿ ಹೊರ ಬಾಕಿ ಸಾಲ ಇದ್ದು, ಆಡಿಟ್ ವರ್ಗೀಕರಣದಲ್ಲಿ ‘ಎ’ ತರಗತಿ ಕಾಯ್ದುಕೊಂಡಿದೆ ಎಂದರು.
ಸಂಘವು ಪ್ರಸ್ತುತ ವರ್ಷದಲ್ಲಿ ಸಾಲಿಗ್ರಾಮದಲ್ಲಿ ಗ್ರಾಹಕರ ಅನುಕೂಲ ಕ್ಕಾಗಿ ಹೊಸ ಬ್ಯಾಂಕಿಂಗ್ ಶಾಖೆಯನ್ನು ಪ್ರಾರಂಭಿಸಲಿದ್ದು ಹಾಗೂ ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಪೇತ್ರಿಯಲ್ಲಿ ಗೋದಾಮು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದರು. ಅದರೊಂದಿಗೆ ಕಾಪು ತಾಲೂಕಿನಲ್ಲಿ ಹೊಸ ಬ್ಯಾಂಕಿಂಗ್ ಶಾಖೆಯನ್ನು ತೆರೆಯುವ ಯೋಜನೆಯನ್ನು ಸಂಘವು ಹಮ್ಮಿಕೊಂಡಿದೆ ಎಂದರು. ಸಂಘಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ 2023-24ನೇ ಸಾಲಿನ ಮಹಾಸಭೆಯಲ್ಲಿ ‘ಸಾಧನಾ ಪ್ರಶಸ್ತಿ’ ಲಭಿಸಿದ್ದು, ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ, ಸದಸ್ಯರ, ಗ್ರಾಹಕರ ಸಹಕಾರ ವಿಶ್ವಾಸದಿಂದ ಇದು ಸಾಧ್ಯವಾಗಿದೆ ಎಂದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಸಂಘದ ಪ್ರಗತಿಯನ್ನು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಂಘದ ಮಾಜಿ ಅಧ್ಯಕ್ಷರಾದ ದಿ. ರಘುರಾಮ ಎಸ್. ಶೆಟ್ಟಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕರಾದ ಅರುಣ್ ಕುಮಾರ್ ಎಸ್. ವಿ., ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಲಾವಣ್ಯ ಕೆ. ಆರ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಅರುಣ್ ಕುಮಾರ್ ಎಸ್. ವಿ. ಅವರು ಸಂಘವು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85ಕ್ಕಿಂತ ಅಧಿಕ ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಪುರಸ್ಕರಿಸಲಾಯಿತು.
ನಿರ್ದೇಶಕರಾದ ಎನ್. ರಮೇಶ್ ಶೆಟ್ಟಿ ಹಾವಂಜೆ, ಬಿ.ಅಶೋಕ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ, ಡಾ.ಐ.ದೇವಿಪ್ರಸಾದ್ ಶೆಟ್ಟಿ ಬೆಳಪು, ಕೆ.ತಿಮ್ಮಪ್ಪ ಹೆಗ್ಡೆ ಉಪ್ಪಿನಕೋಟೆ, ಶಿವಾಜಿ ಎಸ್ ಸುವರ್ಣ ಬೆಳ್ಳೆ, ಎಚ್.ಗಂಗಾಧರ ಶೆಟ್ಟಿ ಮಂದಾರ್ತಿ, ಟಿ. ಸತೀಶ ಶೆಟ್ಟಿ ಕೆಮ್ಮಣ್ಣು, ಶುಭಕರ ಶೆಟ್ಟಿ ವಂಡಾರು, ಶ್ರೀಧರ ವಿ.ಶೆಟ್ಟಿ ಆರೂರು, ವೆಂಕಟಕೃಷ್ಣ ಗೋಳಿ ಎಂ. ಮೈರ್ಮಾಡಿ, ಶ್ರೀಧರ್ ಪಿ.ಎಸ್. ಸಾಸ್ತಾನ, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಸುಕನ್ಯಾರವರು ಉಪಸ್ಥಿತರಿದ್ದರು. ನಿರ್ದೇಶಕ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ವಿಜಯಶೀಲ ಹೆಗ್ಡೆ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಕೆ. ನಾರಾಯಣ ಬಲ್ಲಾಳ್ ವಂದಿಸಿದರು. ಸಂಘದ ಲೆಕ್ಕಾಧಿಕಾರಿ ವಿಶಾಖ್ ಜಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.