ಉಡುಪಿ, ಸೆ.18: ಪ್ರಾಕೃತಿಕ ವಿಕೋಪಗಳು ಸಂಬಂಧಿಸಿದಾಗ ಸ್ಥಳೀಯಾಡಳಿತ ಜೊತೆಗೆ ಪರಿಹಾರ ಕಾರ್ಯಾಚರಣೆಯಲ್ಲಿ ಹಗಲಿರುಳು ಶ್ರಮಿಸಿ ಸಾರ್ವಜನಿಕರ ಸೇವೆಗೆ ಶೀಘ್ರವಾಗಿ ಸ್ಪಂದಿಸುವ ವಿವಿಧ ಇಲಾಖೆಗಳ ಸಿಬ್ಬಂದಿ ಹಾಗೂ ಸ್ವಯಂ ಸೇವಕರ ಕಾರ್ಯ ಅಭಿನಂದನಾರ್ಹ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಅಂಗವಾಗಿ ಪ್ರಾಕೃತಿಕ ವಿಕೋಪ ನಿರ್ವಹಣೆಯಲ್ಲಿ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಮೆಸ್ಕಾಂ, ಅರಣ್ಯ, ಅಗ್ನಿಶಾಮಕ ದಳ, ಪೌರ ಕಾರ್ಮಿಕರು ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶೌರ್ಯ ತಂಡದ ಸದಸ್ಯರಿಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಆಯೋಜಿಸಿದ್ದ ಗೌರವಾರ್ಪಣೆ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ, ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ತುರ್ತು ಸಂದರ್ಭದಲ್ಲಿ ಮಾನವೀಯತೆಯಿಂದ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವ ಸಿಬ್ಬಂದಿಗಳಿಗೆ ಗೌರವ ನೀಡುವ ಮೂಲಕ ಇನ್ನಷ್ಟು ಸೇವೆಗೆ ಪ್ರೇರಣೆ ನೀಡಿದಂತಾಗಲಿದ್ದು, ಸರಕಾರಿ ಸಿಬ್ಬಂದಿಗಳ ಜೊತೆ ಜೊತೆಗೆ ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಕೈಜೋಡಿಸಿದಲ್ಲಿ ಪರಿಹಾರ ಕಾರ್ಯಗಳು ಪರಿಣಾಮಕಾರಿಯಾಗಿ ನಡೆಸಲು ಸಹಕಾರಿಯಾಗಲಿದೆ ಎಂದರು. ಉಡುಪಿ ವಿಧಾನಸಭಾ ಕ್ಷೇತ್ರದ ವಿವಿಧ ಇಲಾಖೆಯ ಸುಮಾರು 450 ಮುಂಚೂಣಿ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಮಾಜ ಸೇವಕರಾದ ನಿತ್ಯಾನಂದ ಒಳಕಾಡು, ವನಜ ಪೂಜಾರ್ತಿ, ಉಡುಪಿ ನಗರಸಭೆ ಉಪಾಧ್ಯಕ್ಷರಾದ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಂದರ ಕಲ್ಮಾಡಿ, ಗಣ್ಯರಾದ ಉದಯ ಕುಮಾರ್ ಶೆಟ್ಟಿ ಕಿದಿಯೂರು, ಕಿಶೋರ್ ಕುಮಾರ್ ಕುಂದಾಪುರ, ನಗರಸಭೆ ಮಾಜಿ ಅಧ್ಯಕ್ಷರಾದ ಕಿರಣ್ ಕುಮಾರ್, ದಿನಕರ ಶೆಟ್ಟಿ ಹೆರ್ಗ, ನಗರಸಭಾ ಸದಸ್ಯರಾದ ಅಶೋಕ್ ನಾಯ್ಕ್, ವಿಜಯ ಕೊಡವೂರು, ಗಿರೀಶ್ ಅಂಚನ್, ಗಿರಿಧರ ಆಚಾರ್ಯ, ಪ್ರಮುಖರಾದ ರಾಜೀವ್ ಕುಲಾಲ್, ರಾಜೇಶ್ ಶೆಟ್ಟಿ ಬಿರ್ತಿ, ದಿನೇಶ್ ಅಮೀನ್, ಶ್ರೀವತ್ಸ, ಹರೀಶ್ ಶೆಟ್ಟಿ ಚೇರ್ಕಾಡಿ, ಕಮಲಾಕ್ಷ ಹೆಬ್ಬಾರ್, ಗೌತಮ್ ಅಗ್ರಹಾರ, ರೇಷ್ಮಾ ಉದಯ ಶೆಟ್ಟಿ, ನೀತಾ ಪ್ರಭು, ವೀಣಾ ಶೆಟ್ಟಿ, ಸಂಧ್ಯಾ ರಮೇಶ್ ಮೊದಲಾದವರು ಉಪಸ್ಥಿತರಿದ್ದರು.