Sunday, January 19, 2025
Sunday, January 19, 2025

ವಿಶ್ವಕರ್ಮರಿಂದ ಸುಂದರ ಸಮಾಜ ನಿರ್ಮಾಣ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ವಿಶ್ವಕರ್ಮರಿಂದ ಸುಂದರ ಸಮಾಜ ನಿರ್ಮಾಣ: ಶಾಸಕ ಗುರ್ಮೆ ಸುರೇಶ್ ಶೆಟ್ಟಿ

Date:

ಉಡುಪಿ, ಸೆ.17: ಸುಂದರ ಸಮಾಜ ನಿರ್ಮಾಣ ಮಾಡುವಲ್ಲಿ ವಿಶ್ವಕರ್ಮರ ಪಾತ್ರ ಮಹತ್ತರವಾದುದು. ವಿಶ್ವಕರ್ಮ ಸಮುದಾಯದವರ ವಾಸ್ತುಶಿಲ್ಪ ರಚನಾ ಶೈಲಿಯು ಪ್ರತಿಯೊಬ್ಬರನ್ನು ಬೆರಗುಗೊಳಿಸುತ್ತದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು. ಅವರು ಮಂಗಳವಾರ ನಗರದ ಕುಂಜಿಬೆಟ್ಟುವಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಂಚಮುಖಿ ವಿಶ್ವಕರ್ಮರನ್ನು ನಾನಾ ರೀತಿಯಲ್ಲಿ ಸಮಾಜ ನೆನೆಪಿನಲ್ಲಿಟ್ಟುಕೊಳ್ಳುತ್ತದೆ. ಮರಗೆಲಸ, ಕಬ್ಬಿಣದ ಕೆಲಸ, ಚಿನ್ನ-ಬೆಳ್ಳಿ ತಯಾರಕರು, ಶಿಲ್ಪಕಲಾ, ಕಂಚು ಹಿತ್ತಾಳೆ ನಿರ್ವಹಿಸುವವರಿಗೆ ಮೂಲ ಪುರುಷ ವಿಶ್ವಕರ್ಮರು. ದ್ವಾಪರ ಯುಗದಲ್ಲಿ ದ್ವಾರಕೆಯನ್ನು, ತ್ರೇತಾಯುಗದಲ್ಲಿ ಸುವರ್ಣ ಲಂಕೆಯನ್ನು, ಸತ್ಯಾ ಯುಗದಲ್ಲಿ ಸ್ವರ್ಗ ನಗರವನ್ನು ಹಾಗೂ ಕಲಿಯುಗದಲ್ಲಿ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥವನ್ನು ವಿಶ್ವಕರ್ಮರು ಸ್ಥಾಪಿಸಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯನ್ನು ಜಾರಿಗೊಳಿಸಿದ್ದು, ಇದು ಕೋಟ್ಯಾಂತರ ಜನರ ಜೀವನಕ್ಕೆ ದಾರಿದೀಪವಾಗಿದೆ. ಈ ಬಗ್ಗೆ ಹೆಚ್ಚು ಪ್ರಚಾರ ಮೂಡಿಸಿ, ಸಮುದಾಯದ ಜನರನ್ನು ಹೆಚ್ಚು ಫಲಾನುಭವಿಗಳಾನ್ನಿಸಬೇಕು ಎಂದರು. ಮಣಿಪಾಲದ ಮಾಹೆಯ ಡಾ.ಪ್ರತಿಮಾ ಜಯಪ್ರಕಾಶ್ ಉಪನ್ಯಾಸ ನೀಡಿ ಮಾತನಾಡಿ, ವಿಶ್ವಕರ್ಮರು ಕುಲಕಸುಬುಗಳ ಮೂಲಕ ಸಮಾಜಕ್ಕೆ ಬೆಳಕಾದವರು. ವಿಶ್ವಕರ್ಮ ಎಂಬುವುದು ವ್ಯಕ್ತಿಯಲ್ಲ. ಒಂದು ಅದ್ವಿತೀಯ ಶಕ್ತಿ ಎಂದು ಸಮುದಾಯದವರು ನಂಬಿದ್ದಾರೆ. ವಿಶ್ವಕರ್ಮ ಸಮುದಾಯ ಅಭಿವೃದ್ಧಿಗೆ ಸರಕಾರ ಅನೇಕ ಸವಲತ್ತುಗಳನ್ನು ಮೀಸಲಿಟ್ಟಿದೆ. ಅವುಗಳ ಸದುಪಯೋಗವನ್ನು ಸಮುದಾಯದವರು ಪಡೆದುಕೊಳ್ಳಬೇಕು ಎಂದರು. ವಿಶ್ವಕರ್ಮ ಜಯಂತಿಯು ಬರೀ ಒಂದು ಸಮುದಾಯಕ್ಕೆ ಮೀಸಲಾದ ಜಯಂತಿಯಲ್ಲ. ವಿಶ್ವಕರ್ಮರಂತೆ ಸಮಾಜದ ಅನೇಕ ರೀತಿಯ ಸಮುದಾಯದವರು ಕೂಡ ಅವರದ್ದೇ ಆದ ರೀತಿಯಲ್ಲಿ ನೆರವೇರಿಸಿಕೊಂಡು ಬರುತ್ತಿದ್ದಾರೆ. ಕುಶಲ ಕರ್ಮಿಗಳನ್ನು ಗೌರವಿಸಿ, ಕಾರ್ಮಿಕರ ಕೊಡುಗೆಗಳನ್ನು ಗುರುತಿಸುವುದರೊಂದಿಗೆ, ಅವರ ಕುಶಲತೆಯ ಹಾಗೂ ಶ್ರಮದ ಮಹತ್ವವನ್ನು ಈ ದಿನದಂದು ತಿಳಿಸಲಾಗುತ್ತದೆ ಎಂದರು.

ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವಕರ್ಮ ಸಮುದಾಯದ ಆರಾಧ್ಯ ದೈವ ದೇವಶಿಲ್ಪಿ ವಿಶ್ವಕರ್ಮರು. ವಿಶ್ವಕರ್ಮರು ಸಮುದಾಯಕ್ಕೆ ಹಾಗೂ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದುದು. ಅಜಂತಾ, ಎಲ್ಲೋರ, ಐಹೊಳೆ, ಹಂಪಿ, ಬೇಲೂರು-ಹಳೆಬೀಡು, ಜಕಣಾಚಾರ್ಯರು ಶ್ರವಣಬೆಳಗೊಳದಲ್ಲಿ ನಿರ್ಮಿಸಿದ ಬಾಹುಬಲಿ ಮೂರ್ತಿಯು ವಿಶ್ವಕರ್ಮರ ಕೈಚಳಕಕ್ಕೆ ಉದಾಹರಣೆಯಾಗಿದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಅನೇಕ ಸವಾಲುಗಳನ್ನು ವಿಶ್ವಕರ್ಮ ಸಮಾಜದವರು ಎದುರಿಸುತ್ತಿದ್ದಾರೆ. ವಿಶ್ವಕರ್ಮ ಸಮುದಾಯದ ಮಕ್ಕಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕು. ಮುಖ್ಯವಾಗಿ ಹೆಣ್ಣು ಮಕ್ಕಳು ಸಹ ಉನ್ನತ ಶಿಕ್ಷಣ ಪಡೆಯಬೇಕು ಎಂದರು.

ವಿವಿಧ ಕ್ಷೇತ್ರಗಳಲ್ಲಿ ವೃತ್ತಿ ಸಾಧನೆಗೈದ ವಿಶ್ವಕರ್ಮ ಸಮಾಜದ ಐದು ಹಿರಿಯರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದ.ಕ ಮತ್ತು ಉಡುಪಿ ಜಿಲ್ಲಾ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ರಾಷ್ಟ್ರೀಯ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಜಿಲ್ಲಾ ಅಧ್ಯಕ್ಷ ಕೆ.ವೆಂಕಟೇಶ್ ಆಚಾರ್ಯ, ವಿಶ್ವಕರ್ಮ ಒಕ್ಕೂಟ ಮತ್ತು ರಾಷ್ಟ್ರೀಯ ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಅನಂತಯ್ಯ ಆಚಾರ್ಯ ನಿರೂಪಿಸಿ, ರತ್ನಾಕರ ಆಚಾರ್ಯ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!