ಗಣಿತನಗರ, ಸೆ.9: ಕಾರ್ಕಳ ಜ್ಞಾನಸುಧಾದ ಆವರಣದಲ್ಲಿರುವ ಶ್ರೀ ಮಹಾಗಣಪತಿ ದೇವಸ್ಥಾನದ ಸಹಯೋಗದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ, ದಶಮಾನೋತ್ಸವದ ಸಂಭ್ರಮದಲ್ಲಿರುವ ಹವ್ಯಾಸಿ ಯಕ್ಷಗಾನ ಕಲಾವಿದರ ಸಂಗಮವಾಗಿರುವ ಜ್ಞಾನಸುಧಾದ ‘ಯಕ್ಷೆತ್ಕರ್ಷ’ ಬಳಗದಿಂದ, ‘ಜಾಂಬವತಿ ಕಲ್ಯಾಣ’ ಯಕ್ಷಗಾನ ತಾಳಮದ್ದಳೆ ಜರುಗಿತು. ಸ.ಪ.ಪೂ.ಕಾಲೇಜು ಬೈಲೂರಿನ ಭೌತಶಾಸ್ತ್ರ ಉಪನ್ಯಾಸಕ ಗೋಪಾಲಕೃಷ್ಣ ಗೋರೆಯವರ ನಿರ್ದೇಶನದಲ್ಲಿ ಜರುಗಿದ ‘ಜಾಂಬವತಿ ಕಲ್ಯಾಣ’ ತಾಳಮದ್ದಳೆಯ ಹಿಮ್ಮೇಳದಲ್ಲಿ ಭಾಗವತರಾಗಿ ಸ,ಪ.ಪೂ.ಕಾಲೇಜು ಬೈಲೂರು ಇಲ್ಲಿನ ರಸಾಯನಶಾಸ್ತ್ರ ಉಪನ್ಯಾಸಕರಾದ ಸೀತಾರಾಮ್ ಭಟ್ ಬೈಲೂರು, ಮದ್ದಳೆಯಲ್ಲಿ, ‘ಯಕ್ಷೆತ್ಕರ್ಷ’ದ ತರಬೇತುದಾರ, ಆನಂದ್ ಗುಡಿಗಾರ್ ಕೆರ್ವಾಶೆ, ಚೆಂಡೆಯಲ್ಲಿ ಶ್ರೀನಿಧಿ ಆಚಾರ್, ಚಕ್ರತಾಳದಲ್ಲಿ ರಂಜಿತ್ ಪಾಟ್ಕರ್ ಸಹಕರಿಸಿದರು.
ಮುಮ್ಮೇಳದಲ್ಲಿ ಅರ್ಥಧಾರಿಗಳಾಗಿ ಶ್ರೀರಾಮನ ಪಾತ್ರದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿ, ಶ್ರೀಕೃಷ್ಣನ ಗೋಪಾಲ ಕೃಷ್ಣ ಗೋರೆ, ಬಲರಾಮನಾಗಿ ಸ.ಪ.ಪೂ.ಕಾಲೇಜಿನ ಮುನಿಯಾಲಿನ ಗಣಿತ ಉಪನ್ಯಾಸಕ ಅನಿಲ್ ಕುಮಾರ್, ಸತ್ರಾರ್ಜಿತನ ಪಾತ್ರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಭಂಡಿ, ಜಾಂಬವಂತನ ಪಾತ್ರದಲ್ಲಿ ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಹಾಗೂ ‘ಯಕ್ಷೆತ್ಕರ್ಷ’ದ ನಿರ್ವಾಹಕಿ ಸಂಗೀತಾ ಕುಲಾಲ್, ಜಾಂಬವತಿಯಾಗಿ ಗಣಿತ ಶಿಕ್ಷಕಿ ಆಜ್ಞಾ ಸೋಹಂ, ನಾರದನಾಗಿ ಸಂಸ್ಥೆಯ ನಿರ್ವಹಣಾ ವಿಭಾಗದ ಶೇಖರ್ ಶೆಟ್ಟಿ, ಪ್ರಸೇನನ ಪಾತ್ರದಲ್ಲಿ ಗಣಿತ ಉಪನ್ಯಾಸಕ ಶ್ರೇಯಾನ್ ಜೈನ್ ಮಿಂಚಿದ್ದರು.