ಉಡುಪಿ, ಸೆ.4: ಭಾರತೀಯ ಅಂಚೆ ಇಲಾಖೆಯಲ್ಲಿ 40 ವರ್ಷ 5 ತಿಂಗಳುಗಳ ಸುದೀರ್ಘ ಸೇವೆಯೊಂದಿಗೆ ನಿವೃತ್ತಿಗೊಳ್ಳುತ್ತಿರುವ ಅಂಚೆ ಪೇದೆ ರಾಮ ಹಾಂಡ ಅವರಿಗೆ ಬೀಳ್ಕೊಡುಗೆ ಕಾರ್ಯಕ್ರಮವು ಶಂಕರನಾರಾಯಣದ ಕ್ಷೀರವಾರಿಧಿ ಸಭಾಂಗಣದಲ್ಲಿ ನೆರವೇರಿತು. ಶಂಕರನಾರಾಯಣ ವೀರ ಕಲ್ಲುಕುಟಿಕ ದೈವಸ್ಥಾನದ ಮೊಕ್ತೇಸರರಾದ ಮಂಜುನಾಥ ಶೇಟ್ ಕಾರ್ಯಕ್ರಮದ ಅಧ್ಯಕ್ಷೆ ವಹಿಸಿ ಮಾತನಾಡುತ್ತಾ, ಪ್ರಾಮಾಣಿಕ ಸೇವೆಗೆ ಹೆಸರಾಗಿರುವ ಏಕೈಕ ಇಲಾಖೆ ಎಂದರೆ ಭಾರತೀಯ ಅಂಚೆ. ಇಂತಹ ಒಂದು ಇಲಾಖೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದೆ ಎಂದರೆ ಅವರು ಪುಣ್ಯವಂತರು ಎಂದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಂಕರನಾರಾಯಣ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಸುಧಾಕರ ಕುಲಾಲ, ಶಂಕರನಾರಾಯಣ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಸಚ್ಚಿದಾನಂದ ವೈದ್ಯ ನಿವೃತ್ತರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ನಿವೃತ್ತರಾದ ರಾಮ ಹಾಂಡ ಮತ್ತು ಗಿರಿಜ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಂದಾಪುರ ದಕ್ಷಿಣ ವಿಭಾಗದ ಅಂಚೆ ನಿರೀಕ್ಷಕರಾದ ಶಂಕರ ಲಮಾಣಿ ನಿವೃತ್ತರಿಗೆ ಪ್ರಮಾಣ ಪತ್ರ ಹಸ್ತಾಂತರಿಸಿ, ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ತಮ್ಮ ನಿವೃತ್ತಿ ಜೀವನ ಸುಖ, ಶಾಂತಿ ನೆಮ್ಮಯಿಂದ ಕೂಡಿರಲಿ ಎಂದು ಹಾರೈಸಿದರು.
ನಿವೃತ್ತ ಪೋಸ್ಟ್ ಮಾಸ್ಟರ್ ಕೃಷ್ಣ ಶೇಟ್, ಪೋಸ್ಟ್ ಮಾಸ್ಟರ್ ಕೃಷ್ಣ ಕುಲಾಲ್, ಅಂಚೆ ಮೇಲ್ವಿಚಾರಕರಾದ ನಂದೀಶ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ರವಿ ಕುಲಾಲ, ಕೆ ಸದಾಶಿವ ಶೆಟ್ಟಿ, ನಿವೃತ್ತ ಬಿ.ಎಸ್.ಎನ್.ಎಲ್ ಅಧಿಕಾರಿ ರಮೇಶ ಶೇರ್ವೆಗಾರ, ಹಿರಿಯರಾದ ಉದ್ಯಮಿ ಶ್ರೀಧರ ಶೇಟ್, ಶಂಕರನಾರಾಯಣ ಜೇಸಿಐ ಅಧ್ಯಕ್ಷ ಜೆ.ಎಫ್.ಎಮ್. ವಿರಾಜ್ ಶೇಟ್, ಶಿಕ್ಷಕ ಬೋಜು ಹಾಂಡ, ಚಕ್ರಾನಂದ ಭಟ್, ಪ್ರಭಾಕರ ಕುಲಾಲ, ಹಿರಿಯರಾದ ನಾಗು ಕುಲಾಲ, ಅಂಚೆ ಸಿಬ್ಬಂದಿ
ಮಮತಾ, ಆಶಾ, ರಮೇಶ್, ಶಾಖಾ ಅಂಚೆ ಸಿಬ್ಬಂದಿ ಉಪಸ್ಥಿತರಿದ್ದರು. ಶಂಕರನಾರಾಯಣ ಅಂಚೆ ಕಛೇರಿಯ ಉಪ ಅಂಚೆ ಪಾಲಕಿ ಚೇತನಾ ಶ್ರೀಧರ್ ಕಾರ್ಯಕ್ರಮ ನಿರೂಪಿಸಿದರು. ಗಣಪತಿ ಕಾಮತ್ ಸನ್ಮಾನಿತರನ್ನು ಪರಿಚಯಿಸಿದರು. ಅಮಾಸೆಬೈಲು ಶಾಖಾ ಅಂಚೆ ಪಾಲಕ ಶ್ರೀನಿವಾಸ್ ಭಟ್ ಪ್ರಾರ್ಥನೆಗೈದರು. ಆಶಾ ಸ್ವಾಗತಿಸಿ, ಪ್ರವೀಣ ನಾಯ್ಕ ಬಾಳೆಕೊಡ್ಲು ವಂದಿಸಿದರು.