ಉಡುಪಿ, ಸೆ.2: ಪುಸ್ತಕ ನೀಡುವ ಬೌದ್ಧಿಕ ಸತ್ಯದ ದರ್ಶನ ಯಾವುದೇ ಮಾಧ್ಯಮಗಳು ನೀಡಲು ಸಾಧ್ಯವಿಲ್ಲ. ಪುಸ್ತಕದಿಂದ ಬದುಕು ಬದಲಾಗಲು ಸಾಧ್ಯ ಎಂದು ಖ್ಯಾತ ಸಾಹಿತಿ ಡಾ. ಬಿ ಜನಾರ್ದನ ಭಟ್ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಘಟಕದ ವತಿಯಿಂದ ಮಂಗಳವಾರ ಡಾ. ಎ. ವಿ. ಬಾಳಿಗ ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಮನೆಯೇ ಗ್ರಂಥಾಲಯ ಅಭಿಯಾನದ ಶತ ಸಂಭ್ರಮ ಕಾರ್ಯಕ್ರಮದಲ್ಲಿ ಗ್ರಂಥಾಲಯಕ್ಕೆ ಪುಸ್ತಕ ಹಸ್ತಾಂತರಿಸಿ ಮಾತನಾಡಿದರು. ಪುಸ್ತಕ ಓದುವ ಅಭ್ಯಾಸ ಇತ್ತೀಚಿಗಿನ ಶಿಕ್ಷಣ ಕ್ರಮದಿಂದ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಕಸಾಪದ ಈ ಕಾರ್ಯಕ್ರಮ ಶ್ಲಾಘನೀಯ ಎಂದರು. ವಿದೇಶದಲ್ಲಿ ಯಾವುದೇ ಪುಸ್ತಕವನ್ನು ಡಿಜಿಟಲ್ ಮಾಧ್ಯಮದ ಮೂಲಕ ಕ್ಷಣಾರ್ಧದಲ್ಲಿ ಪಡೆಯುವ ವ್ಯವಸ್ಥೆ ಇದೆ. ಇದು ಕನ್ನಡದಲ್ಲಿ ಕೂಡ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ. ವಿ. ಭಂಡಾರಿ ವಹಿಸಿ ಮಾತನಾಡಿದರು. ಮಾನಸಿಕ ಒತ್ತಡ ಕಡಿಮೆ ಮಾಡಲು ಪುಸ್ತಕ ಅತ್ಯುತ್ತಮ ಸಾಧನ ಎಂದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ವಿಶ್ವನಾಥ ಶೆಣೈ ನೂತನ ಗ್ರಂಥಾಲಯವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಂಕರ್, ಮನೋರೋಗ ತಜ್ಞ ಡಾ. ವಿರೂಪಾಕ್ಷ ದೇವರಮನೆ, ಕಸಾಪ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಮೋಹನ್ ಉಡುಪ ಉಪಸ್ಥಿತರಿದ್ದರು. ಮನೆಯೇ ಗ್ರಂಥಾಲಯ ಅಭಿಯಾನದ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು.
ಕಸಾಪ ಉಡುಪಿ ತಾಲೂಕು ಗೌರವ ಕಾರ್ಯದರ್ಶಿ ರಂಜಿನಿ ವಸಂತ್, ಸದಸ್ಯರಾದ ಭುವನ ಪ್ರಸಾದ್ ಹೆಗ್ಡೆ, ಡಾ. ನರೇಂದ್ರ ಕುಮಾರ್, ದೀಪ ಚಂದ್ರಶೇಖರ್, ಹಫೀಸ್ ರೆಹಮಾನ್, ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಉರಗತಜ್ಞ ಗುರುರಾಜ್ ಸನಿಲ್ ಮತ್ತಿತರರು ಉಪಸ್ಥಿತರಿದ್ದರು. ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್ ಪಿ ಸ್ವಾಗತಿಸಿ ಆಶಯ ಮಾತುಗಳನ್ನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿ, ಸೌಮ್ಯ ವಂದಿಸಿದರು.