ಉಡುಪಿ, ಆ.30: ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ- ಸಂಜೀವಿನಿ, ಜಿಲ್ಲಾ ಪಂಚಾಯತ್ ಉಡುಪಿ,ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠ ಉಡುಪಿ ಇವರ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿಯ ಕೃಷ್ಣ ಮಠದ ಗೀತಾ ಮಂದಿರದಲ್ಲಿ ರಾಜ್ಯ ಮಟ್ಟದ ಸಂಜೀವಿನಿ ಕರಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟಮೇಳ ನಡೆಯಿತು.
ಜಿಲ್ಲೆಯಲ್ಲಿ ಸಂಜೀವಿನಿ ಯೋಜನೆಯಡಿಯಲ್ಲಿ ತರಲಾಗಿರುವ ಗ್ರಾಮೀಣ ಪ್ರದೇಶದ ಮಹಿಳೆಯರು ಸಾಮಾಜಿಕವಾಗಿ ಸಬಲೀಕರಣಗೊಳ್ಳುತ್ತಿದ್ದಾರೆ.ವಿವಿಧ ಕ್ಷೇತ್ರಗಳಲ್ಲಿ ಅನೇಕ ನವೀನ ಕಾರ್ಯಕ್ರಮಗಳನ್ನು ಜಿಲ್ಲೆಯ ಸಂಜೀವಿನಿ ಯೋಜನೆಯಡಿ ಅನುಷ್ಟಾನ ಮಾಡಲಾಗಿದೆ. ಇಂದು ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ವಿವಿಧ ಆದಾಯೋತ್ಪನ್ನ ಚಟುವಟಿಕೆಗಳ ಜೊತೆಯಲ್ಲಿ ತಮ್ಮ ಕೌಶಲ್ಯದ ಮೂಲಕ ವಿವಿಧ ಕರಕುಶ ವಸ್ತುಗಳ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಈ ಕರಕುಶಲ ವಸ್ತುಗಳು ಶತಮಾನಗಳಿಂದ ಮಾನವ ನಾಗರಿಕತೆಯ ಅವಿಭಾಜ್ಯ ಅಂಗವಾಗಿದೆ ಇಂದು ಸ್ವ ಸಹಾಯ ಗುಂಪಿನ ಮಹಿಳೆಯರು ನಿರ್ದಿಷ್ಟವಾಗಿ ಕರಕುಶಲ ಉದ್ಯಮದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ. ನಶಿಸಿ ಹೋಗುತ್ತಿರುವ ಕರಕುಶಲ ಉದ್ಯಮವನ್ನು ಉಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಜೊತೆಯಲ್ಲಿ ಸಾಂಪ್ರದಾಯಿಕ ಜ್ಞಾನ ಮತ್ತು ತಂತ್ರಗಳನ್ನು ಪೀಳಿಗೆಯಿಂದ ಪೀಳಿಗೆಗೆ ರವಾನಿಸುತ್ತಿದ್ದಾರೆ. ಈ ಮಹಿಳೆಯರು ತಯಾರಿಸುವ ಕರಕುಶಲ ವಸ್ತುಗಳು ನೋಡಲು ಚಂದಮಾತ್ರವಲ್ಲದೆ ಬಳಕೆಗೂ ಅನುಕೂಲವಾದವುಗಳು ಹಾಗೂ ಅವುಗಳು ಬದುಕಿಗೂ ಒಂದು ಅರ್ಥ ಕೊಡುತ್ತಿವೆ ಹಾಗೂ ತಮ್ಮ ಕಲಾತ್ಮಕ ಮೌಲ್ಯ,ಸಾಂಸ್ಕೃತಿಕ ಮಹತ್ವ ಮತ್ತು ಆರ್ಥಿಕ ಸಾಮರ್ಥ್ಯಕ್ಕಾಗಿ ಹೊಸ ಮೆಚ್ಚುಗೆಯನ್ನುಗಳಿಸಿವೆ.ಕರಕುಶಲ ಉದ್ಯಮದಲ್ಲಿ ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ವಿಭಿನ್ನ ವಿಧಾನಗಳು, ಮಹಿಳೆಯರು ಎದುರಿಸುತ್ತಿರುವ ಸವಾಲುಗಳು ಮತ್ತು ಕರಕುಶಲ ವಸ್ತುಗಳ ಮೂಲಕ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ.
ಗ್ರಾಹಕರಾಗಿ ಸಂಜೀವಿನಿ ಮಹಿಳೆಯರು ಕೈಯಿಂದ ತಯಾರಿಸಿದ ಕರಕುಶಲ ವಸ್ತುಗಳನ್ನು ಖರೀದಿಸಿ ಕರಕುಶಲ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ದೃಷ್ಟಿಯಿಂದ ಹಾಗೂ ಅವರ ಬದುಕಿನ ಹಿಂದಿನ ಕಥೆಗಳ ಬಗ್ಗೆ ತಿಳಿದುಕೊಳ್ಳುವ ಮೂಲಕ ನಾವು ನಮ್ಮ ಬೆಂಬಲವನ್ನು ಒದಗಿಸುವ ನಿಟ್ಟಿನಲ್ಲಿ ಗೀತಾ ಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಸಂಜೀವಿನಿ ಗುಂಪಿನ ಸದಸ್ಯರಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಯಿತು. ಇದರಲ್ಲಿ ಜಿಲ್ಲೆಯ ಹಾಗೂ ಹೊರ ಜಿಲ್ಲೆಯ 25 ಮಹಿಳಾ ಉದ್ಯಮಿದಾರರು ತಾವೇ ತಯಾರಿಸಿದ ವಿವಿಧ ಬಗೆಯ ಊದುಬತ್ತಿ, ಸೋಪುಗಳು, ಕಲಶ ಕನ್ನಡಿ, ಗೃಹಪ್ರವೇಶ ಪರಿಕರ, ಹಳದಿ ಕಾರ್ಯಕ್ರಮ ಸಾಮಗ್ರಿ, ದೇವರ ಹರಿವಾಣ, ತೋರಣಗಳು, ವಿವಿಧ ಚಿತ್ತಾರಗಳ ಪೈಟಿಂಗ್, ಸೀರೆ, ಕುಂಬಾರಿಕೆ ವಸ್ತುಗಳು, ಕೃತಕ ಆಭರಣ, ಹ್ಯಾಂಡ್ ಮೇಡ್ ಬ್ಯಾಗ್, ತೆಂಗಿನ ಚಿಪ್ಪಿನ ವಿವಿಧ ಕಲಾಕೃತಿಗಳು,ಅಲಂಕಾರಿಕ ಹೂವಿನ ಗಿಡಗಳು,ಗೊಂಬೆಗಳು, ಬಿದಿರಿನ ಬುಟ್ಟಿ ಇತ್ಯಾದಿ ಗಮನಸೆಳೆದವು.ಶ್ರೀ ಕೃಷ್ಣ ಜನ್ಮಾಷ್ಟಮಿ ದಿನವಾದ್ದರಿಂದ ಶ್ರೀ ಕೃಷ್ಣ ಮಠಕ್ಕೆ ಆಗಮಿಸಿದ ಹೆಚ್ಚಿನ ಸಂಖ್ಯೆ ಪ್ರವಾಸಿಗರು ಹಾಗೂ ಭಕ್ತರು ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿ ಕರಕುಶಲ ವಸ್ತುಗಳನ್ನು ಖರೀದಿಸಿ ಮಹಿಳೆಯರ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.