ಕೋಟ, ಆ.28: ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮತ್ತು ಟೀಮ್ ಅಭಿಮತದ ‘ದೇವವೃಕ್ಷ ಅಭಿಯಾನ’ ಕಾರ್ಯಕ್ರಮ ಕಾರಣಿಕ ಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಧ್ಯಾಯರವರು ಮಾತನಾಡಿ, ಜನಸೇವಾ ಟ್ರಸ್ಟ್ ಮಾಡುತ್ತಿರುವಂತಹ ಈ ಕೆಲಸ ಅತ್ಯಂತ ಶ್ಲಾಘನೀಯ. ಸನಾತನ ಧರ್ಮವು ಪ್ರಕೃತಿಯಲ್ಲೇ ದೇವರನ್ನು ಕಂಡು ಆರಾಧಿಸಿಕೊಂಡು ಬಂದಿರುವ ಪರಂಪರೆ ಇರುವಂತಹದ್ದು. ನಮ್ಮಲ್ಲಿ ಹಲವಾರು ವೃಕ್ಷಗಳನ್ನ ದೇವತರುಗಳು ಎಂದೇ ಆರಾಧಿಸುತ್ತೇವೆ. ಅಂತಹ ಗಿಡಗಳನ್ನ ದೇವಸ್ಥಾನಗಳಲ್ಲಿ ನೆಡುವಂತ ಕಾರ್ಯ ಅರ್ಥಪೂರ್ಣವಾದದ್ದು. ಟ್ರಸ್ಟಿನ ’ದೇವವೃಕ್ಷ’ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆಗೊಂಡ ಈ ಅಭಿಯಾನ ದಿವ್ಯಕ್ಷೇತ್ರದ ಸನ್ನಿಧಾನದಲ್ಲಿ ಶ್ರೀಗಂಧ, ಬಿಲ್ವ, ರುದಾಕ್ಷಿ, ಸಂಪಿಗೆ, ಪಾರಿಜಾತ ಹೀಗೆ ದೇವತರುಗಳ ನೆಡುವ ಮೂಲಕ ಮುಂದುವರಿಯುತ್ತದೆ. ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಪ್ರಭಂದಕರಾದ ನಟೇಶ್ ಕಾರಂತ್, ಕೆ., ರಾಜರಾಮ ಉಪಾಧ್ಯಾಯ ಟೀಮ್ ಅಭಿಮತದ ನಿಖಿಲ್ ನಾಯಕ್ ತೆಕ್ಕಟ್ಟೆ, ಲೋಕೇಶ್ ಅಂಕದಕಟ್ಟೆ, ರಾಘವೇಂದ್ರ ರಾಜ್ ಸಾಸ್ತಾನ, ಸುಜೀರ್ ಶೆಟ್ಟಿ ಹೇರಿಕುದ್ರು, ರಾಜೇಶ್ ಕಾಂಚನ್ ಕೊರವಡಿ, ಮುಂತಾದವರು ಉಪಸ್ಥಿತರಿದ್ದರು.