ಉಚ್ಚಿಲ, ಆ.28: ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇಗುಲದ ಪ್ರಾಂಗಣದಲ್ಲಿ ಮೊಗವೀರ ಮಹಾಜನ ಸಂಘದ ಆಯೋಜನೆಯಲ್ಲಿ ನಡೆಯಲಿರುವ ಉಚ್ಚಿಲ ದಸರ -2024 ರ ಆಮಂತ್ರಣ ಪತ್ರಿಕೆಯನ್ನು ದೇವಳದ ಗೌರವ ಸಲಹೆಗಾರ ನಾಡೋಜ ಡಾ. ಜಿ ಶಂಕರ್ ರವರು ಮಂಗಳವಾರ ಬಿಡುಗಡೆಗೊಳಿಸಿದರು. ಆಮಂತ್ರಣ ಪತ್ರಿಕೆಗೆ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಕೆವಿ ರಾಘವೇಂದ್ರ ಉಪಾಧ್ಯಾಯರವರು ಪೂಜೆ ಸಲ್ಲಿಸಿ ಪ್ರಾರ್ಥನೆಗೈದರು. ಆಮಂತ್ರಣ ಪತ್ರ ಬಿಡುಗಡೆಗೊಳಿಸಿದ ನಾಡೋಜ ಡಾ. ಜಿ. ಶಂಕರ್ ಮಾತನಾಡಿ, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಳದಲ್ಲಿ ಉಚ್ಚಿಲ ದಸರಾವು ಅಕ್ಟೋಬರ್ 3ರಂದು ನವದುರ್ಗೆಯರು ಮತ್ತು ಶ್ರೀ ಶಾರದಾ ಪ್ರತಿಷ್ಠಾಪನೆಯೊಂದಿಗೆ ಮೊದಲ್ಗೊಂಡು 12ರವರೆಗೆ ದಸರಾ ವೈಭವ ನಡೆಯಲಿದೆ. ಈ ಬಾರಿಯ ಉಚ್ಚಿಲ ದಸರಾದಲ್ಲಿ ಯುವ ದಸರಾ, ದೇಹದಾಢ್ಯಸ್ಪರ್ಧೆ, ಹೆಣ್ಣು ಮಕ್ಕಳ ಹುಲಿ ಕುಣಿತ ಸ್ಪರ್ಧೆ, ಸಾಮೂಹಿಕ ದಾಂಡಿಯ ನೃತ್ಯ, ಯುವ ಸಂಗೀತೋತ್ಸವ, , ಸಾವಿರ ಸುಮಂಗಲೆಯರಿಂದ ಸಾಮೂಹಿಕ ಕುಂಕುಮಾರ್ಚನೆ, ಪ್ರತಿದಿನ ವಿವಿಧ ಮನೋರಂಜನಾ ಕಾರ್ಯಕ್ರಮಗಳು, ಪ್ರತಿದಿನ ಅಪರಾಹ್ನ ಅನ್ನಸಂತರ್ಪಣೆ, ಅಕ್ಟೋಬರ್ 12ರಂದು ಅಪರಾಹ್ನ 3 ಗಂಟೆಗೆ ಶೋಭಾಯಾತ್ರೆ, ಕಾಪು ಬೀಚ್ ದೀಪಸ್ತಂಭದ ಬಳಿ ನಡೆಯಲಿದೆ ಎಂದರು.
ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, ಜೀಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ ಅಮೀನ್, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಉದ್ಯಮಿ ಭುವನೇಂದ್ರ ಕಿದಿಯೂರು, ಮಹಿಳಾ ಘಟಕಾಧ್ಯಕ್ಷೆ ಉಷಾ ರಾಣಿ, ಉಚ್ಚಿಲ ಬಡಾ ಗ್ರಾಮ ಪಂಚಾಯತ್ ಅಧಯಕ್ಷ ಶಿವಕುಮಾರ್ ಮೆಂಡನ್, ದೇವಳದ ಪ್ರಬಂಧಕ ಸತೀಶ್ ಅಮೀನ್ ಪಡುಕೆರೆ, ಸಮಿತಿ ಸದಸ್ಯರು, ಮಹಿಳಾ ಘಟಕದ ಸದಸ್ಯರು ಉಪಸ್ಥಿತರಿದ್ದರು.