ಉಡುಪಿ, ಆ.25: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಆಯೋಜನೆಯಲ್ಲಿ ಸಂಸ್ಕೃತಿ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಪ್ರಾಯೋಜಕತ್ವದಲ್ಲಿ ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಳದ ಆಶ್ರಯದಲ್ಲಿ ಕವಿ ದಿ| ಕುರಾಡಿ ಸೀತಾರಾಮ ಅಡಿಗ ಕಾವ್ಯ ಪ್ರಶಸ್ತಿ ಪ್ರದಾನ 2024, ಮಹಿಳಾ ಕಾವ್ಯ ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನ ಅಂಬಲಪಾಡಿಯ ಭವಾನಿ ಮಂಟಪದಲ್ಲಿ ನಡೆಯಿತು. ಕವಿಗಳಾದ ವಿಜಯಪುರದ ಸುಮಿತ್ ಮೇತ್ರಿ ಹಾಗೂ ಮಂಗಳೂರಿನ ಜಯಶ್ರೀ ಬಿ. ಕದ್ರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಿಳಾ ಕಾವ್ಯ ಸಂವಾದದಲ್ಲಿ ಉಡುಪಿ ಜಿಲ್ಲೆಯ ಮಹಿಳಾ ಕವಯತ್ರಿಯರಾದ ಡಾ. ಮಾಧವಿ ಭಂಡಾರಿ, ಡಾ. ನಿಕೇತನ, ಸುಕನ್ಯಾ ಕಳಸ, ಸುಧಾ ಅಡುಕಳ, ಪೂರ್ಣಿಮಾ ಸುರೇಶ್ ಭಾಗವಹಿಸಿ ಇಂದಿನ ಮಹಿಳಾ ಬರಹಗಾರರಿಗೆ ಇರುವ ಸಮಸ್ಯೆಗಳನ್ನು ಸಂವಾದದಲ್ಲಿ ಚರ್ಚಿಸಲಾಯಿತು. ಸಂವಾದ ಕಾರ್ಯಕ್ರಮವನ್ನು ಉಪಾಧ್ಯಕ್ಷೆ ಸಂಧ್ಯಾ ಶೆಣೈ ನಿರ್ವಹಿಸಿದರು.
ಕಾವ್ಯ ಗಾಯನವನ್ನು ವಿದುಷಿ ಉಮಾಶಂಕರಿ ನಡೆಸಿಕೊಟ್ಟರು. ಕುರಾಡಿ ಸೀತಾರಾಮ ಅಡಿಗ ಅವರು ಬರೆದ ಪುಸ್ತಕ ಜೀವನ ರೇಖೆ ಮರು ಮುದ್ರಣವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ ಅವರು ಲೋಕಾರ್ಪಣೆಗೊಳಿಸಿದರು. ಧರ್ಮದರ್ಶಿಗಳಾದ ಡಾ. ನೀ ಬಿ ವಿಜಯ ಬಲ್ಲಾಳ್ ಮಾತನಾಡುತ್ತಾ, ಕಾವ್ಯ ಸೃಷ್ಟಿ ಇಂದಿನ ದಿನಗಳಲ್ಲಿ ಅತಿ ಅಗತ್ಯ. ಕವನಗಳನ್ನು ಬರೆಯುವ ಹವ್ಯಾಸವನ್ನು ಇಂದಿನ ಜನಾಂಗಕ್ಕೆ ಪ್ರೇರೇಪಿಸಬೇಕು. ಕಾವ್ಯಗಳ ಮೂಲಕ ಸಮಾಜವನ್ನು ಸುಧಾರಿಸಬಹುದು. ಹಿರಿಯ ಸಾಹಿತಿಗಳನ್ನು ಗೌರವಿಸುವ ಹಾಗೂ ನೆನಪಿಸಿಕೊಳ್ಳುವ ಕಾರ್ಯಕ್ರಮಗಳು ನಿರಂತರ ಆಗುವ ಅಗತ್ಯವಿದೆ ಎಂದರು. ಕನ್ನಡದ ಹಿರಿಯ ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಅವರು ಪ್ರಶಸ್ತಿ ವಿಜೇತ ಕೃತಿಗಳ ಕುರಿತು ಮಾತನಾಡಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕ ಉಡುಪಿ ವಿಶ್ವನಾಥ ಶೆಣೈ, ಉಪಾಧ್ಯಕ್ಷ ನಾಗರಾಜ್ ಹೆಬ್ಬಾರ್, ವಿಶ್ವ ಭಾರತಿ ಕರ್ನಾಟಕ ಪ್ರತಿಷ್ಠಾನ ಬೆನಗಲ್ ಇದರ ಅಧ್ಯಕ್ಷ ಸೂರಾಲು ನಾರಾಯಣ ಮಡಿ, ಪೋಷಕಾಧ್ಯಕ್ಷರಾದ ಅಶೋಕ್ ಭಟ್, ಚಾಂತಾರು ಉಪಸ್ಥಿತರಿದ್ದರು. ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಡಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜೋಶಿ ವಂದಿಸಿದರು. ಸಂಚಾಲಕ ರವಿರಾಜ್ ಎಚ್ ಪಿ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಸಮಿತಿಯ ಸಂಚಾಲಕಿ ಪೂರ್ಣಿಮಾ ಜನಾರ್ದನ್ ನಿರೂಪಿಸಿದರು.