ಉಡುಪಿ: ಹಿಜಾಬ್ ವಿಚಾರದಲ್ಲಿ ಶಿಕ್ಷಣ ಸಂಸ್ಥೆಯಲ್ಲಿ ಸಮವಸ್ತ್ರದ ಪರವಾಗಿ ಹೈಕೋರ್ಟ್ ನೀಡಿರುವ ಐತಿಹಾಸಿಕ ತೀರ್ಪು ರಾಜ್ಯದ ವಿದ್ಯಾರ್ಥಿಗಳ ಸುವ್ಯವಸ್ಥಿತ ಶಿಕ್ಷಣಕ್ಕಾಗಿ ನಡೆಸಿದ ಕಾನೂನು ಬದ್ಧ ಹೋರಾಟಕ್ಕೆ ಸಂದ ಜಯವಾಗಿದ್ದು, ಹಿಜಾಬ್ ವಿವಾದದ ಮೂಲಕ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡಿದ ಮತಾಂಧ ಶಕ್ತಿಗಳ ವಿರುದ್ಧ ಹೋರಾಟ ನಿರಂತರವಾಗಿರಲಿದೆ ಎಂದು ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಆರು ಮಂದಿ ವಿದ್ಯಾರ್ಥಿನಿಯರು ಮತಾಂಧ ದೇಶದ್ರೋಹಿ ಸಂಘಟನೆಗಳ ಕುಮ್ಮಕ್ಕಿನಿಂದ ಉಡುಪಿಯಲ್ಲಿ ಆರಂಭಗೊಂಡ ಹಿಜಾಬ್ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೊಳಗಾಗಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ನಾಶಪಡಿಸಲು ಹೊರಟವರಿಗೆ ಹೈಕೋರ್ಟ್ ಆದೇಶ ತಕ್ಕ ಉತ್ತರ ನೀಡಿದೆ.
ಶಿಕ್ಷಣ ವ್ಯವಸ್ಥೆಯೊಂದಿಗೆ ಚೆಲ್ಲಾಟವಾಡಿ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಹುನ್ನಾರ ನಡೆಸಿದ್ದ ಎಸ್ ಡಿ ಪಿ ಐ, ಸಿ ಎಫ್ ಐ ಸಂಘಟನೆಗಳ ವಿರುದ್ಧ ಸಂಘಟಿತ ಕಾನೂನು ಹೋರಾಟದ ಮೂಲಕ ಮೊದಲ ಜಯವನ್ನು ಸಾಧಿಸಿದ್ದು, ರಾಷ್ಟ್ರ ವಿರೋಧಿ ಸಂಘಟನೆಗಳ ವಿರುದ್ಧ ಮುಂದಿನ ದಿನಗಳಲ್ಲಿಯೂ ಹೋರಾಟ ನಿರಂತರವಾಗಿ ನಡೆಸಲಿದ್ದೇವೆ.
ದೇಶದ ಕಾನೂನು ಸುವ್ಯವಸ್ಥೆ ಹದಗೆಡಿಸುವ ಮೂಲಕ ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವ ಮತಾಂಧರ ಟೂಲ್ ಕಿಟ್ ಭಾಗವಾಗಿ ಬಡ ವಿದ್ಯಾರ್ಥಿನಿಯರ ಮೂಲಕ ಸೃಷ್ಟಿಸಿದ್ದ ಹಿಜಾಬ್ ವಿವಾದಕ್ಕೆ ಹೈಕೋರ್ಟ್ ದಿಟ್ಟ ತೀರ್ಪು ನೀಡುವ ಮೂಲಕ ಶಿಕ್ಷಣ ವ್ಯವಸ್ಥೆಗೆ ಶಕ್ತಿ ತುಂಬಿದ್ದು, ಸಮವಸ್ತ್ರ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಕಟ್ಟುನಿಟ್ಟಿನಲ್ಲಿ ಅನುಷ್ಠಾನಕ್ಕೆ ಸರಕಾರ ಮುಂದಾಗುವ ವಿಶ್ವಾಸವಿದೆ.
ಹಿಜಾಬ್ ವಿವಾದದ ವಿದ್ಯಾರ್ಥಿಗಳಿಗೆ ಕುಮ್ಮಕ್ಕು ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಮಾಡಲು ಯತ್ನಿಸಿದ್ದ ಶಿಕ್ಷಣ ವ್ಯವಸ್ಥೆಯಲ್ಲಿ ಇಸ್ಲಾಮೀಕರಣ ನಡೆಸಲು ಮುಂದಾಗಿರುವ ಮತಾಂಧ ಶಕ್ತಿಗಳ ಮುಖವಾಡ ಕಳಚಿದ್ದು, ಇಂತಹ ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟ ಮುಂದುವರಿಯಲಿದ್ದು ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಪೂರಕವಾಗಲಿದೆ.
ಈ ಐತಿಹಾಸಿಕ ತೀರ್ಪು ಬರುವಲ್ಲಿ ಸಮವಸ್ತ್ರ ವಿಚಾರದಲ್ಲಿ ದಿಟ್ಟ ವಾದ ಮಂಡಿಸಿದ ಎಲ್ಲ ನ್ಯಾಯವಾದಿಗಳಿಗೆ ವಂದನೆಗಳನ್ನು ಸಲ್ಲಿಸುವುದಾಗಿ ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.