ಉಡುಪಿ, ಆ.23: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಇವರ ಸಹಯೋಗದಲ್ಲಿ ಸಂಸ್ಥೆಯ ನಿವಾಸಿನಿಯಾದ ಚಿ.ಸೌ.ಖುಷ್ಬು ಸುಮೇರಾ ಅವರ ವಿವಾಹವು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ದಿನೇಶ ಎ.ಪಿ ಅಂಬುತೀರ್ಥ ಅವರ ಮಗನಾದ ಮಧುರಾಜ್ ಎ.ಡಿ ಅವರೊಂದಿಗೆ ನಗರದ ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ವಾದ್ಯ, ತಾಳ- ಮೇಳಗಳೊಂದಿಗೆ ನಡೆದ ಶುಭಲಗ್ನ ಸುಮುಹೂರ್ತದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಶಾಸ್ತ್ರೋಕ್ತವಾಗಿ ಧಾರೆ ಎರೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ತೀರ್ಥಹಳ್ಳಿಯ ಮೂಲದ 29 ವರ್ಷ ವಯೋಮಿತಿಯ ಮಧುರಾಜ್ ಎ.ಡಿ ಅವರು, ನಿಲಯದ ನಿವಾಸಿನಿಯಾದ 21 ವರ್ಷ ಪ್ರಾಯದ ಖುಷ್ಬು ಸುಮೇರಾ ಅವರನ್ನು ಮದುವೆಯಾಗುವುದಾಗಿ ಈ ಹಿಂದೆ ಪ್ರಸ್ತಾಪಿಸಿರುತ್ತಾರೆ. ಮಧುರಾಜ್ ಅವರು ಪದವಿ ವಿದ್ಯಾರ್ಹತೆ ಹೊಂದಿದ್ದು, ಜೀವನ ನಿರ್ವಹಣೆಗಾಗಿ ಕೃಷಿ ಮತ್ತು ಕ್ಯಾಟರಿಂಗ್ ಕಾರ್ಯಗಳಲ್ಲಿ ತೊಡಗಿಕೊಂಡು, ಆರ್ಥಿಕವಾಗಿ ಸದೃಢರಾಗಿರುವ ಮಧುರಾಜ್ ಎ.ಡಿ ಕುಟುಂಬವನ್ನು ಪೊಲೀಸ್ ಹಾಗೂ ರಾಜ್ಯ ನಿಲಯದ ಸಿಬ್ಬಂದಿಗಳು ಅವರ ಹಿನ್ನೆಲೆಯನ್ನು ಪರಿಶೀಲಿಸಿ, ಆರೋಗ್ಯ ದೃಢೀಕರಣ ಪಡೆದುಕೊಂಡು, ಹುಡುಗಿ ಒಪ್ಪಿಗೆಯೊಂದಿಗೆ ರಾಜ್ಯ ಮಹಿಳಾ ನಿಲಯದಲ್ಲಿ ಈ ಶುಭಕಾರ್ಯವನ್ನು ಅದ್ದೂರಿಯಾಗಿ ಮದುವೆಗೆ ದಾನಿಗಳು ಸಹಕಾರದಿಂದ ನಡೆಸಲಾಗಿದೆ ಎಂದರು.
ಸರಕಾರದಿಂದ ಹುಡುಗಿಯ ಹೆಸರಿನಲ್ಲಿ ಮುಂದಿನ ಜೀವನ ನಿರ್ವಹಣೆಗೆ 20000 ರೂ. ನೀಡಲಾಗಿದ್ದು, ಮದುವೆಯ ನಂತರ ವಿವಾಹ ನೋಂದಣಿ ಮಾಡಿಸಲಾಗುವುದು. ಪ್ರತೀ ಮೂರು ತಿಂಗಳಿಗೊಮ್ಮೆ ಮೂರು ವರ್ಷದವರೆಗೆ ಇಲಾಖೆಯು ವಧು-ವರರ ಮುಂದಿನ ಜೀವನದ ಮೇಲೆ ನಿಗಾ ವಹಿಸಲಿದೆ ಎಂದರು. ಪ್ರಸ್ತುತ ಮಹಿಳಾ ನಿಲಯದಲ್ಲಿ 66 ಮತ್ತು ಮೂರು ಮಕ್ಕಳು ಸೇರಿದಂತೆ ಒಟ್ಟು 69 ಮಂದಿ ಇದ್ದು, ಮಹಿಳಾ ನಿಲಯದಲ್ಲಿ ವಾಸವಿರುವ ಹುಡುಗಿಯರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅವರ ಭವಿಷ್ಯದ ಬಗೆಗಿನ ನಿರ್ಧಾರಗಳನ್ನು ಕೈಗೊಳ್ಳಲಾಗುವುದು ಎಂದರು.
ರಾಜ್ಯ ಮಹಿಳಾ ನಿಲಯವನ್ನು ತಳಿರು, ತೋರಣ, ರಂಗೋಲಿಯಿಂದ ಅಲಂಕರಿಸಲಾಗಿದ್ದು, ಬಂದತಂತಹ ಅತಿಥಿಗಳಿಗೆ ಇಲಾಖೆಯ ಸಿಬ್ಬಂದಿಗಳು ಆದರದಿಂದ ಬರಮಾಡಿಕೊಂಡರು. ಮದುವೆಯ ಬಂದವರು ವಧುವರರಿಗೆ ಶುಭಹಾರೈಸಿ, ಸಿಹಿಭೋಜನವನ್ನು ಸವಿದರು. ಕಾರ್ಯಕ್ರಮದಲ್ಲಿ ಎ.ಎಸ್.ಪಿ ಟಿ. ಸಿದ್ದಲಿಂಗಪ್ಪ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪುರುಷೋತ್ತಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನಾ, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ಜಿಲ್ಲಾ ನಿರೂಪಣಾ ಅಧಿಕಾರಿ ಅನುರಾಧ ಹಾದಿಮನೆ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.