ಉಡುಪಿ: ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದ್ದು, ಉತ್ತಮ ಅಭ್ಯಾಸ, ಹವ್ಯಾಸ ಮತ್ತು ಜೀವನ ಶೈಲಿಯಿಂದ ಹಲವಾರು ಕಾಯಿಲೆಗಳಿಂದ ದೂರವಿರಬಹುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕದ ಸರ್ಟಿಫೈಡ್ ಮೆಡಿಕಲ್ ಅಫೀಸರ್ ಮತ್ತು ನುರಿತ ಪ್ರಥಮ ಚಿಕಿತ್ಸಾ ತರಬೇತುದಾರರಾದ ಡಾ. ಕೀರ್ತಿ ಹೇಳಿದರು.
ಅವರು ಪಿಪಿಸಿ ಕಾಲೇಜು ಆಡಿಟೋರಿಯಂ ಹಾಲ್‌ನಲ್ಲಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಶಾಖೆ ಮತ್ತು ಎಸ್. ಯುವ ರೆಡ್ ಕ್ರಾಸ್ ಘಟಕ ಪೂರ್ಣ ಪ್ರಜ್ಞ ಕಾಲೇಜು ಉಡುಪಿ ಇವರ ಸಹಯೋಗದೊಂದಿಗೆ ರೆಡ್ ಕ್ರಾಸ್ ಸಂಸ್ಥೆ ಶತಮಾನೋತ್ಸವ ಅಂಗವಾಗಿ ನಡೆದ ಉಚಿತ ಕ್ಯಾನ್ಸರ್ ತಪಾಸಣಾ ಮತ್ತು ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅತ್ಯಾಧುನಿಕ ಜೀವನಶೈಲಿಯಿಂದ ಉಂಟಾಗುವ ಕ್ಯಾನ್ಸರ್ ಕಾಯಿಲೆಯ ಅಪಾಯಗಳು ಬಹುತೇಕವಾಗಿದ್ದು, ಮದ್ಯಪಾನ, ಧೂಮಪಾನ ಹಾಗೂ ದೈಹಿಕ ಚಟುವಟಿಕೆಯ ಕೊರತೆಯಿಂದ ಹೆಚ್ಚು ತೂಕದವರ ಕೊಬ್ಬಿನ ಅಂಶದಿಂದ ಕ್ಯಾನ್ಸರ್‌ಗಳು ಬರುವ ಅಪಾಯವಿದೆ. ಮದ್ಯಪಾನ ಸೇವನೆ ಕಡಿಮೆ ಮಾಡುವ ಮೂಲಕ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಂದ ಪಾರಾಗಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೂರ್ಣಪ್ರಜ್ಞ ಕಾಲೇಜು ಪ್ರಾಂಶುಪಾಲ ಡಾ. ರಾಘವೇಂದ್ರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ, ಯುವ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಡಾ. ರಂಗಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.