ಆ.21: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನಿಂದ ಡಾ.ಟಿ.ಎಂ.ಎ.ಪೈ ರೋಟರಿ ಆಸ್ಪತ್ರೆಗೆ ರೂ.20 ಲಕ್ಷಗಳ ಸಹಾಯಧನ ಹಾಗೂ ಇತರ ಸಾಮಾಜಿಕ ನೆರವು
ಕಾರ್ಕಳ, ಆ.19: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಸಂಸ್ಥಾಪಕರ ದಿನವಾದ ಆಗಸ್ಟ್ 21ರಂದು ಸಾಮಾಜಿಕ ನೆರವು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಆ ದಿನ ಬೆಳಗ್ಗೆ ಕೆ.ಎಂ.ಸಿ. ಬ್ಲಡ್ ಸೆಂಟರ್‌ನ ನೆರವಿನೊಂದಿಗೆ ರಕ್ತದಾನ ಶಿಬಿರ ನೆರವೇರಲಿರುವುದು. ಮಧ್ಯಾಹ್ನ 3.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಸ್ಥಳೀಯ ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಕಣ್ಣಿನ ವಿಭಾಗಕ್ಕೆ ರೂ. 20 ಲಕ್ಷಗಳ ಸಹಾಯಧನ, ಮಂಗಳೂರಿನ ಶಕ್ತಿ ಎಜ್ಯುಕೇಶನ್ ಟ್ರಸ್ಟ್ಗೆ 1ಲಕ್ಷ ರೂ.ಗಳ ವಿದ್ಯಾರ್ಥಿ ವೇತನವನ್ನು, ಮಣಿಪಾಲದ ಮೇಘ ಶೆಟ್ಟಿಗಾರ್ ಇವರಿಗೆ ಮನೆನಿರ್ಮಾಣದ ಪ್ರಯುಕ್ತ ರೂ. 10 ಸಾವಿರ., ಸ.ಪ್ರೌ.ಶಾಲೆ ತೊರೆಹಡ್ಲುವಿಗೆ ರೂ. 10 ಸಾವಿರ ಆರ್ಥಿಕ ನೆರವು ನೀಡಲಾಗುವುದು.
ಸನ್ಮಾನ ಕಾರ್ಯಕ್ರಮ: ಇದೇ ಸಂದರ್ಭ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ ಹಾಗೂ ಕಾರ್ಕಳ ಮೆಸ್ಕಾಂನ ಎ ಮತ್ತು ಬಿ ವಿಭಾಗದ ಪವರ್ ಮೆನ್‌ಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಲಿರುವುದು. ರಕ್ತದಾನ ಶಿಬಿರವನ್ನು ಕೆ.ಎಂ.ಸಿ. ಬ್ಲಡ್ ಸೆಂಟರ್‌ನ ನಿರ್ದೇಶಕರಾದ ಡಾ.ಶಮಿ ಶಾಸ್ತ್ರಿ ಉದ್ಘಾಟಿಸಲಿದ್ದಾರೆ. ಮಧ್ಯಾಹ್ನದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಶಾರದಾ ವಿದ್ಯಾಲಯಗಳ ಅಧ್ಯಕ್ಷರಾದ ಪ್ರೊ.ಎಂ.ಬಿ.ಪುರಾಣಿಕ್ ವಹಿಸಲಿದ್ದಾರೆ. ಡಾ.ಟಿ.ಎಂ.ಎ ಪೈ ರೋಟರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೀರ್ತಿನಾಥ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಎ.ಪಿ.ಜಿ.ಇ.ಟಿ ಪ್ರಕಟಣೆ ತಿಳಿಸಿದೆ.