ಸಾಲಿಗ್ರಾಮ, ಆ.15: ಹರ್ ಘರ್ ತಿರಂಗಾ ಅಂಗವಾಗಿ ಸಾಲಿಗ್ರಾಮ ಕಯಾಕಿಂಗ್ ತಂಡ ವಿಭಿನ್ನವಾಗಿ ರಾಷ್ಟ್ರ ಪ್ರೇಮವನ್ನು ಮೆರೆಯುವ ಪ್ರಯತ್ನ ಮಾಡಿದೆ. ಸೀತಾ ನದಿಯಲ್ಲಿ ಕಯಾಕಿಂಗ್ ಮೂಲಕ ಪ್ರಕೃತಿ ವಿಸ್ಮಯಗಳನ್ನು ತೋರಿಸಿ ಜನರಲ್ಲಿ ಪ್ರಕೃತಿ ಪ್ರೇಮವನ್ನು ಬಿತ್ತುವ ಕೆಲಸ ಮಾಡುತ್ತಿರುವ ಸಾಲಿಗ್ರಾಮ ಕಯಾಕಿಂಗ್ ತಂಡ ಈ ಬಾರಿಯೂ ವಿಭಿನ್ನ ಪ್ರಯತ್ನ ನಡೆಸಿದೆ.
ಕಳೆದ ಬಾರಿ ಸೀತಾ ನದಿಯ ಮಧ್ಯದಲ್ಲಿ ಕಯಾಕಿಂಗ್ ಮೂಲಕ ತೆರಳಿ ಅಲ್ಲಿ ಧ್ವಜಸ್ತಂಭ ನೆಟ್ಟು ಧ್ವಜಾರೋಹಣ ನಡೆಸಿದ ತಂಡ, ಈ ಬಾರಿ ನದಿಯ ಮಧ್ಯದಲ್ಲಿ ಕಾಂಡ್ಲಾ ಮರದ ನಡುವೆ ಕಾಂಡ್ಲಾ ನದಿಗೆ ಸೇತುವೆ ರಚಿಸಿ ಧ್ವಜಾರೋಹಣ ಮಾಡಿ ಅನ್ನವಿತ್ತ ಪ್ರಕೃತಿಯಲ್ಲಿ ರಾಷ್ಟ್ರಪ್ರೇಮವನ್ನು ಉತ್ತೇಜಿಸುವ ಪ್ರಯತ್ನ ಮಾಡಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಧ್ವಜಾರೋಹಣಗೈದು ಮಾತನಾಡಿ, ಯುವಕರ ಕಾರ್ಯ ಪ್ರಶಂಸನೀಯ. ಯುವಕರಲ್ಲಿನ ರಾಷ್ಟ್ರಪ್ರೇಮ ಯುವ ಜನಾಂಗಕ್ಕೆ ಮಾದರಿ. ಪ್ರತೀ ಬಾರಿಯೂ ನವೀನ ಆಲೋಚನೆಗಳ ಮೂಲಕ ಕಾರ್ಯನಿರ್ವಹಿಸಿ ಸಮಾಜಕ್ಕೆ ಮಾದರಿಯಾಗಿದ್ದರೆ ಎಂದರು. ಪ್ರಕೃತಿ ಮಡಿಲಲ್ಲಿ ಭಾರತಾಂಬೆಯನ್ನು ನಿಲ್ಲಿಸಿ ಜನರಿಗೆ ಪ್ರಕ್ರತಿ ಪ್ರೇಮದ ಜೊತೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಲು ಸಂದೇಶ ನೀಡಿದರು. ಸಾಲಿಗ್ರಾಮ ಕಯಾಕಿಂಗ್ ನ ಮುಖ್ಯಸ್ಥರಾದ ಮಿಥುನ್ ಕುಮಾರ್ ಮೆಂಡನ್ ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.