ಬ್ರಹ್ಮಾವರ: ನೆಹರು ಯುವ ಕೇಂದ್ರ ಉಡುಪಿ ಮತ್ತು ಸಮೃದ್ಧಿ ಮಹಿಳಾ ಮಂಡಳಿ (ರಿ) ಪೇತ್ರಿ ಇವರ ಜಂಟಿ ಆಶ್ರಯದಲ್ಲಿ ಸಮೃದ್ಧಿ ಮಹಿಳಾ ಮಂಡಳಿಯಲ್ಲಿ ಮಹಿಳಾ ದಿನಾಚರಣೆ ಹಾಗೂ ಉಚಿತ ಹೊಲಿಗೆ ತರಬೇತಿ, ಬಟ್ಟೆ ಚೀಲ ಮತ್ತು ಎಂಬ್ರಾಯ್ಡರಿ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಡೆಯಿತು.
ಕಾರ್ಯಕ್ರಮವನ್ನು ಸಮೃದ್ಧಿಯ ಗೌರವಾಧ್ಯಕ್ಷರಾದ ಲಲಿತಾ ಪಿ. ನಾಯ್ಕ್ ಉದ್ಘಾಟಿಸಿದರು. ನೆಹರು ಯುವ ಕೇಂದ್ರದ ವಿಲ್ಫ್ರೆಡ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯ ಶಿಕ್ಷಕಿ ಆಶಾಲತಾ ಡಿ ರಾವ್ ಉಪಸ್ಥಿತರಿದ್ದರು.
ಶಿಕ್ಷಣ ಫೌಂಡೇಶನ್ ಸಮನ್ವಯಾಧಿಕಾರಿ ರೀನಾ ಹೆಗ್ಡೆ ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳಾ ಸಂಘಟನೆಯ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮೃದ್ಧಿಯ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್ ವಹಿಸಿದ್ದರು. ಮಹಿಳಾ ದಿನಾಚರಣೆಯ ಅಂಗವಾಗಿ ಎಲ್ಲಂಪಳ್ಳಿಯ ವ್ಯಕ್ತಿಯೋರ್ವರಿಗೆ ಶ್ವಾಸಕೋಶ ಮರುಜೋಡಣೆಗಾಗಿ ರೂ. 10,000 ಹಸ್ತಾಂತರಿಸಲಾಯಿತು. ಅಳಿವಿನಂಚಿನ ಪಾಡ್ದನ, ಶೋಭಾನೆ ಹಾಡುಗಳ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಜಲಜ ರವರನ್ನು ಸನ್ಮಾನಿಸಲಾಯಿತು.
ಹೊಲಿಗೆ ಶಿಕ್ಷಕಿ ಯಶೋದಾರವರಿಂದ 3 ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿ ಪಡೆದ 40 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ನಡೆಸಿದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಕಾರ್ಯದರ್ಶಿ ಆಶಾ ಪಾಟೀಲ್, ಪ್ರತಿಮಾ, ಸವಿತಾ ಪ್ರಾರ್ಥಿಸಿ ಸಹನಾ ಕೆ. ಹೆಬ್ಬಾರ್ ಸ್ವಾಗತಿಸಿದರು. ಕೋಶಾಧಿಕಾರಿ ವನಿತಾ ಪಿ. ಶೆಟ್ಟಿ ವಂದಿಸಿದರು. ವನಿತಾ ಎಸ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.